ಶರಣಾಗದಿದ್ದಕ್ಕೆ ಎನ್‌ಕೌಂಟರ್‌: ರೂಪಾ ಮೌದ್ಗಿಲ್‌

| Published : Nov 20 2024, 12:35 AM IST

ಶರಣಾಗದಿದ್ದಕ್ಕೆ ಎನ್‌ಕೌಂಟರ್‌: ರೂಪಾ ಮೌದ್ಗಿಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಎನ್ಕೌಂಟರ್‌ನಲ್ಲಿ ಮೃತಪಟ್ಟ ವಿಕ್ರಮ್ ಗೌಡ ಯಾನೆ ವಿಕ್ರಮ್ ಗೌಡ್ಲು ಯಾನೆ ಶ್ರೀಕಾಂತ್ (46) ಕಬಿನಿ -2 ದಳವನ್ನು ಮುನ್ನೆಡೆಸುತ್ತಿದ್ದ. ಆತನ ಮೇಲೆ ಕರ್ನಾಟಕದಲ್ಲಿ ಕೊಲೆ, ಅಪಹರಣ ಮುಂತಾದ 61 ಮತ್ತು ಕೇರಳದಲ್ಲಿ 19 ಪ್ರಕರಣಗಳಿವೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್‌ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ರಾಜ್ಯದಲ್ಲಿ ನಕ್ಸಲ್ ಶರಣಾಗತಿ ನೀತಿ ಜಾರಿಯಲ್ಲಿದ್ದು, ಅದರಂತೆ ಎಲ್ಲ ನಕ್ಸಲರಿಗೆ ಶರಣಾಗುವಂತೆ ಸೂಚಿಸಲಾಗಿದೆ. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಅದರಂತೆ ಈ ಎನ್‌ಕೌಂಟರ್‌ ನಡೆಸಲಾಗಿದೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್‌ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ನಕ್ಸಲ್ ಎನ್‌ಕೌಂಟರ್‌ ಸ್ಥಳಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಈ ಎನ್ಕೌಂಟರ್‌ನಲ್ಲಿ ಮೃತಪಟ್ಟ ವಿಕ್ರಮ್ ಗೌಡ ಯಾನೆ ವಿಕ್ರಮ್ ಗೌಡ್ಲು ಯಾನೆ ಶ್ರೀಕಾಂತ್ (46) ಕಬಿನಿ -2 ದಳವನ್ನು ಮುನ್ನೆಡೆಸುತ್ತಿದ್ದ. ಆತನ ಮೇಲೆ ಕರ್ನಾಟಕದಲ್ಲಿ ಕೊಲೆ, ಅಪಹರಣ ಮುಂತಾದ 61 ಮತ್ತು ಕೇರಳದಲ್ಲಿ 19 ಪ್ರಕರಣಗಳಿವೆ ಎಂದವರು ಮಾಹಿತಿ ನೀಡಿದರು.

ಈ ಭಾಗದಲ್ಲಿ ನಕ್ಸಲ್ ಓಡಾಟದ ಬಗ್ಗೆ ಆಂತರಿಕ ಭದ್ರತ ವಿಭಾಗಕ್ಕೆ 10 ದಿನಗಳಿಂದ ಖಚಿತ ಮಾಹಿತಿ ಇತ್ತು. ಅದರಂತೆ ಎಎನ್ಎಫ್ ಎಸ್ಪಿ ಜಿತೇಂದ್ರ ದಯಾಮ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆಗೆ ನ.10ರಿಂದಲೇ ಸಿದ್ಧತೆಗಳನ್ನು ನಡೆಸಲಾಗಿತ್ತು. ಅಲ್ಲದೇ ಐಎಸ್‌ಎಫ್‌ನ ಡಿಜಿಪಿ ಪ್ರಣಬ್‌ ಮೋಹನ್ ಅವರು ಕೂಡ ಬಂದು ಕೂಂಬಿಂಗ್‌ನಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದ್ದರು. ಈ ಕಾರ್ಯಾಚರಣೆಗೆ ಬೆಂಗಳೂರಿನಿಂದ ಐಎಸ್ಎಫ್‌ನ 75 ಮತ್ತು ಶಿವಮೊಗ್ಗದಿಂದ 25 ಪೊಲೀಸರನ್ನು ವಿಶೇಷವಾಗಿ ಕರೆಸಲಾಗಿತ್ತು. ಇದೆಲ್ಲಾ ಈಗ ಫಲ ಕೊಟ್ಟಿದೆ. ಇದು ಎಎನ್ಎಫ್ ಸಾಧನೆಗೆ ಇನ್ನೊಂದು ಗರಿ ಆಗಿದೆ ಎಂದು ಅಧಿಕಾರಿಗಳನ್ನು ಶ್ಲಾಘಿಸಿದರು.

ವಿಕ್ರಮ್ ಗೌಡನ ಮನೆಯವರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ, ಮನೆಯವರಿಗೆ ಹಸ್ತಾಂತರಿಸಲಾಗುವುದು ಎಂದವರು ತಿಳಿಸಿದರು.

ವಿಕ್ರಮ್ ಗೌಡ ನಮ್ಮ ರಾಜ್ಯದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ. ರಾಜ್ಯದಲ್ಲಿ ಇನ್ನೂ 4-5 ಸಕ್ರಿಯ ನಕ್ಸಲ್‌ಗಳಿದ್ದಾರೆ. ಈ ಎನ್‌ಕೌಂಟರ್‌ ನಂತರ ಅವರ ಪ್ರತಿಕ್ರಿಯೆ ಏನಿರುತ್ತದೆ ಕಾದು ನೋಡಬೇಕಾಗಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.