ಶಿರಸಿ: ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಉತ್ತೇಜಿಸಬೇಕು ಎಂದು ನೀಲೇಕಣಿ ಸರ್ಕಾರಿ ಪಿಯು ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಾಹಿತಿ ಉಮೇಶ್ ನಾಯ್ಕ್ ಹೇಳಿದರು.

ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ನರೇಬೈಲಿನ ಚಂದನ ಆಂಗ್ಲ ಮಾಧ್ಯಮ ಶಾಲೆ, ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್, ಕದಂಬ ಕನ್ನಡ ಸೇನೆ ಕರ್ನಾಟಕ ನವ ನಿರ್ಮಾಣ ವೇದಿಕೆ ಹಾಗೂ ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ತಾಲೂಕಿನ ನರೇಬೈಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ನಾನು ವಿಜ್ಞಾನಿ–2025 ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಕೂಡ ಕುತೂಹಲ ಬೆಳೆಸಿಕೊಳ್ಳಬೇಕು ಹಾಗೂ ಹೊಸ ವಿಚಾರಗಳ ಬಗ್ಗೆ ಆಸಕ್ತಿ ವಹಿಸಬೇಕು. ಇಂತಹ ಕಾರ್ಯಕ್ರಮಗಳು ಮಕ್ಕಳ ಭವಿಷ್ಯಕ್ಕೆ ಪ್ರೇರಣೆಯಾಗುತ್ತವೆ ಎಂದು ಹೇಳಿದರು.

ಆನಂತರ ಮಾತನಾಡಿದ ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನವೀನ್ ಬಿ. ಶೆಟ್ಟಿ ಅವರು, ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪಾರ ಪ್ರತಿಭೆ ಇದೆ. ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ದೊರೆತರೆ ಅವರು ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿಯೂ ಸಾಧನೆ ಮಾಡಬಲ್ಲರು. ಟೆಲಿಸ್ಕೋಪ್ ತಯಾರಿಕಾ ಕಾರ್ಯಾಗಾರದಲ್ಲಿ ಭಾಗವಹಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆಗೆ ಪಾತ್ರರಾದ ಈ ವಿದ್ಯಾರ್ಥಿಗಳ ಸಾಧನೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಹೆಮ್ಮೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ, ಸಂಶೋಧನಾ ಮನೋಭಾವ ಮತ್ತು ಆತ್ಮವಿಶ್ವಾಸ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ನಾನು ವಿಜ್ಞಾನಿ–2025 ಟೆಲಿಸ್ಕೋಪ್ ತಯಾರಿಕಾ ಕಾರ್ಯಾಗಾರದಲ್ಲಿ ಭಾಗವಹಿಸಿ ಸಾಧನೆಗೈದ ಶಿರಸಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪಶಸ್ತಿ ಪತ್ರವನ್ನು ಗಣ್ಯರಿಂದ ವಿತರಣೆ ಮಾಡಲಾಯಿತು.

ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಎಲ್.ಎಂ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು.


ನಾಗರಾಜ್ ಕಮನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಎಸ್. ನಾಯ್ಕ್, ವಿದ್ಯಾ ನಾಯ್ಕ್, ಪ್ರವೀಣ್ ನಾಯ್ಕ್, ಅನಸೂಯ ಹೆಗಡೆ ಉಪಸ್ಥಿತರಿದ್ದರು.