ಸಾರಾಂಶ
ನಾಟಕೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿರಂಗ ಕಲೆ ಮತ್ತು ರಂಗ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ರಂಗಕಲೆ ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವಿಜಯನಗರ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಹೇಳಿದರು.
ಇಲ್ಲಿನ ದುರ್ಗಾದಾಸ್ ಕಲಾ ಮಂದಿರದಲ್ಲಿ ರಂಗಚೌಕಿ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಶನಿವಾರ ರಾತ್ರಿ ನಡೆದ ರಂಗಚೌಕಿಯ 6ನೇ ವಾರ್ಷದ ವಾರ್ಷಿಕೋತ್ಸವದಲ್ಲಿ ನಾಟಕೋತ್ಸವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಂಗಕಲೆಗಳನ್ನು ಉಳಿಸಲು ಯುವಕರು ಮತ್ತು ಮಕ್ಕಳು ರಂಗಭೂಮಿ ಚಟುವಚಿಕೆಗಳಲ್ಲಿ ತೊಡಗಿಕೊಂಡು ನಾಟಕ, ಸಂಗೀತ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ರಂಗಚಟುವಟಿಕೆಗಳು ನಿರಂತರವಾಗಿ ನಡೆಯಲು ಸಾಧ್ಯ. ರಂಗಕಲೆಗಳನ್ನು ಉಳಿಸಲು ಸರ್ಕಾರ ಸಹ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಪ್ರಾಯೋಜನೆ ಕಾರ್ಯಕ್ರಮ ನೀಡುವ ಮೂಲಕ ಕಲೆಯನ್ನು ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಜೊತೆಗೆ ಸ್ಥಳೀಯ ಉದ್ಯಮಿಗಳು ಮತ್ತು ದಾನಿಗಳು ಕಲಾವಿದರಿಗೆ ನೆರವಾಗುವ ಮೂಲಕ ಕಲೆಯನ್ನು ಉಳಿಸಲು ಮುಂದಾಗಬೇಕು ಎಂದು ಅವರು ಹೇಳಿದರು.
ಇತ್ತೀಚಿಗೆ ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಅದಕ್ಕೆ ಪ್ರೇಕ್ಷಕ ಹಾಗೂ ಕಲಾಪ್ರೇಮಿಗಳ ಪ್ರೋತ್ಸಾಹ ಅಗತ್ಯವಾಗಿದೆ. ರಂಗಭೂಮಿಯಿಂದ ಹೊಸ ಪ್ರತಿಭೆಗಳು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.ಅಲೆಮಾರಿ, ಅರೆ ಅಲೆಮಾರಿ ಸಮುದಾಯ ಹೋರಾಟಗಾರ ಸಣ್ಣ ಮಾರೆಪ್ಪ ಬುಡ್ಗಜಂಗಮ ಅಲೆಮಾರಿ ಜೀವನಾಡಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ರಾಜ್ಯದಲ್ಲಿ ಅಲೆಮಾರಿ ಸಮುದಾಯದ ಜನಸಂಖ್ಯೆ ಆರು ಲಕ್ಷ ಇದೆ. ಈ ಸಮುದಾಯದಲ್ಲಿ 59 ಸಮುದಾಯಗಳು ಇದ್ದು, ಇತ್ತೀಚೆಗೆ ನಡೆದ ಮೀಸಲಾತಿ ಹಂಚಿಕೆಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಅಲೆಮಾರಿ ಸಮುದಾಯಕ್ಕೆ ಸರ್ಕಾರ ನ್ಯಾಯ ದೊರಕಿಸಿಕೊಡುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು.
ದಲಿತಪರ ಹೋರಾಟಗಾರ ಗುಡಿಮನಿ ಕರಿಯಪ್ಪ ಗದ್ದರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಬಡತ, ಶ್ರೀಮಂತ, ಮೇಲು- ಕೀಳು ಎನ್ನುವ ಜಾತಿ ವ್ಯವಸ್ಥೆಯ ತಾರತಮ್ಯ ತೊಲಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತವಾಗಿ ಇರುತ್ತದೆ ಎಂದು ಅವರು ಹೇಳಿದರು.ಹಿರಿಯ ಕಲಾವಿದೆ ಎಸ್. ರೇಣುಕ ಮುದೇನೂರು ಸಂಗಣ್ಣ ಕಲಾರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ. ಕೆ. ನಾಗರತ್ನಮ್ಮ ಮಾತನಾಡಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪಪಂ ಸದಸ್ಯ ಕೆ. ಮಂಜುನಾಥ, ಮೈಸೂರಿನ ಪತ್ರಕರ್ತ ಗಣೇಶ ಅಮೀನಗಡ, ಅರ್ಚಕ ಪೂಜಾರಿ ಬಸವರಾಜ, ಉದ್ಯಮಿ ರಾಮಕೃಷ್ಣ ರಾಯ್ಕರ್ ಉಪಸ್ಥಿತರಿದ್ದರು.ಇದೇ ಸಂದರ್ಭ ಗುಡಿಮನಿ ಕರಿಯಪ್ಪ ಅವರಿಗೆ ಗದ್ದರ್ ಪ್ರಶಸ್ತಿ, ಸಣ್ಣ ಮಾರೆಪ್ಪ ಬುಡ್ಗಜಂಗಮ ಅವರಿಗೆ ಅಲೆಮಾರಿ ಜೀವನಾಡಿ ಪ್ರಶಸ್ತಿ, ಎಸ್. ರೇಣುಕಾ ಅವರಿಗೆ ಮುದೇನೂರು ಸಂಗಣ್ಣ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಂಗಚೌಕಿ ಕಲಾ ಟ್ರಸ್ಟ್‌ನ ಕಾರ್ಯದರ್ಶಿ ಪುಷ್ಪ ಪಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ಟ್ರಸ್ಟ್‌ನ ಅಧ್ಯಕ್ಷ ಸರದಾರ ಬಿ. ವಂದಿಸಿದರು. ಕಲಾವಿದ ಶರಣಬಸವ ನಿರೂಪಿಸಿದರು.ನಂತರ ಬೆಂಗಳೂರಿನ ರಂಗಶಾಲಾ ತಂಡದವರಿಂದ ಒ.ಬಿ.ಇ. ಪ್ರಶಸ್ತಿ ಸಿಗೋದು ಕಷ್ಟ ನಾಟಕ ಪ್ರದರ್ಶನ ನಡೆಯಿತು.