ನಾಟಕಗಳು ಸಮಾಜದ ಕನ್ನಡಿ ಇದ್ದಂತೆ. ರಂಗ ವೇದಿಕೆ ಮೇಲೆ ಪಾತ್ರಧಾರಿಗಳ ಮೂಲಕ ತೋರಿಸುವ ಕಥೆಗಳು ಮತ್ತು ಪಾತ್ರಗಳು ಜನರ ಮನಸ್ಸಿಗೆ ನೇರವಾಗಿ ತಲುಪಿ ಬದಲಾವಣೆ ತರುತ್ತವೆ. ಹಾಗಾಗಿ ಸಾರ್ವಜನಿಕರು ನಾಟಕಗಳನ್ನು ನೋಡಿ ಪ್ರೋತ್ಸಾಹಿಸುವ ಮೂಲಕ ನಮ್ಮ ಸಂಸ್ಕೃತಿ ಪರಂಪರೆ ಸಂರಕ್ಷಣೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಂಗ ಕಲೆಯನ್ನು ಜೀವಂತವಾಗಿರಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಲು ಶ್ರಮಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ತಾಲೂಕಿನ ದೊಡ್ಡಯಾಚೇನಹಳ್ಳಿಯಲ್ಲಿ ರಂಗದಹಬ್ಬ ಹಾಗೂ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಾಟಕಗಳು ಸಮಾಜದ ಕನ್ನಡಿ ಇದ್ದಂತೆ. ರಂಗ ವೇದಿಕೆ ಮೇಲೆ ಪಾತ್ರಧಾರಿಗಳ ಮೂಲಕ ತೋರಿಸುವ ಕಥೆಗಳು ಮತ್ತು ಪಾತ್ರಗಳು ಜನರ ಮನಸ್ಸಿಗೆ ನೇರವಾಗಿ ತಲುಪಿ ಬದಲಾವಣೆ ತರುತ್ತವೆ. ಹಾಗಾಗಿ ಸಾರ್ವಜನಿಕರು ನಾಟಕಗಳನ್ನು ನೋಡಿ ಪ್ರೋತ್ಸಾಹಿಸುವ ಮೂಲಕ ನಮ್ಮ ಸಂಸ್ಕೃತಿ ಪರಂಪರೆ ಸಂರಕ್ಷಣೆ ಮಾಡಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಸಂತೋಷದ ವಿಚಾರ. ನಶಿಸಿ ಹೋಗುತ್ತಿರುವ ರಂಗ ಕಲೆಯನ್ನು ಉಳಿಸಿ ಬೆಳೆಸಬೇಕಿದೆ. ಗ್ರಾಮದ ಮುಖ್ಯ ರಸ್ತೆಯ ಅಭಿವೃದ್ಧಿಗೆ 25 ಲಕ್ಷ ರು. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಶ್ರೀಶಿವಬಸವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಧಾರಾವಾಹಿಗಳಿಗಿಂತ ಪೌರಾಣಿಕ ನಾಟಕಗಳು ಪ್ರಸ್ತುತ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ. ಸಮಾಜವು ಉತ್ತಮ ದಿಕ್ಕಿನಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದರು.

ಪೌರಾಣಿಕ ನಾಟಕ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಕಲಾವಿದರಿಗೆ ನಾವೆಲ್ಲರೂ ಪ್ರೋತ್ಸಾಹಿಸಿ ರಂಗಕಲೆ ಉಳಿಸಲು ಸಹಕಾರ ನೀಡಬೇಕು ಎಂದು ಶ್ರೀಗಳು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಟಿಎಪಿಸಿಎಂಎಸ್ ಸಂಸ್ಥೆ ಅಧ್ಯಕ್ಷ ಟಿ.ಬಲದೇವ್, ವೀರಶೈವ-ಲಿಂಗಾಯತ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್, ವೀರಶೈವ ಮಹಾಸಭಾ ನಿರ್ದೇಶಕ ಮಂಚೀಬೀಡು ಬಸವಲಿಂಗಪ್ಪ, ಯುವ ಜೆಡಿಎಸ್ ಅಧ್ಯಕ್ಷ ಮಹಾದೇವೇಗೌಡ, ಉಪಾಧ್ಯಕ್ಷ ಬೇಲದಕೆರೆ ಮರೀಗೌಡ, ಚೋಕನಹಳ್ಳಿ ಪ್ರಕಾಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವರಿದ್ದರು.