ಮಕ್ಕಳ ಆಸಕ್ತಿಗೆ ಪ್ರೋತ್ಸಾಹಿಸಿ: ದಿವ್ಯಪ್ರಭು

| Published : Nov 16 2025, 02:30 AM IST

ಸಾರಾಂಶ

ಅಕಾಡೆಮಿಯು ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ. ಮಕ್ಕಳಿಗಾಗಿ ಕೇಂದ್ರ ಕಚೇರಿಯಲ್ಲಿ ಅತ್ಯಾಧುನಿಕವಾದ ಸುಸಜ್ಜಿತ ಮಕ್ಕಳ ಸ್ಟುಡಿಯೋ ನಿರ್ಮಿಸಲಾಗುತ್ತಿದೆ.

ಧಾರವಾಡ:

ಎಲ್ಲಿ ಮಕ್ಕಳಿರುತ್ತಾರೋ, ಅಲ್ಲಿ ಪ್ರತಿ ದಿನ, ಪ್ರತಿ ಕ್ಷಣ ಹಬ್ಬದ ವಾತಾವರಣ ಇರುತ್ತದೆ. ಮಕ್ಕಳನ್ನು ಪ್ರೀತಿಸಿ ಅವರ ಭಾವನೆಗಳನ್ನು ಗೌರವಿಸಿ, ಅವರ ಆಸಕ್ತಿ ಪೋಷಿಸಿದರೆ ಅವರನ್ನು ಅದ್ಭುತ ವ್ಯಕ್ತಿಗಳನ್ನಾಗಿ ರೂಪಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅಭಿಪ್ರಾಯಪಟ್ಟರು.

ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯಮಟ್ಟದ ‘ಮಕ್ಕಳ ಹಬ್ಬ’ ಉದ್ಘಾಟಿಸಿ, ಮಕ್ಕಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಬಾಲವಿಕಾಸ ಅಕಾಡೆಮಿ ರಾಜ್ಯಾದ್ಯಂತ ಮಕ್ಕಳನ್ನು ಹಾಗೂ ಅವಕಾಶ ವಂಚಿತ ಮಕ್ಕಳಿಗಾಗಿ ರೂಪಿಸಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಅಕಾಡೆಮಿಯು ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ. ಮಕ್ಕಳಿಗಾಗಿ ಕೇಂದ್ರ ಕಚೇರಿಯಲ್ಲಿ ಅತ್ಯಾಧುನಿಕವಾದ ಸುಸಜ್ಜಿತ ಮಕ್ಕಳ ಸ್ಟುಡಿಯೋ ನಿರ್ಮಿಸುತ್ತಿದ್ದು ಅದನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.

ಯೋಜನಾಧಿಕಾರಿ ಅಕ್ಕಮಹಾದೇವಿ ಕೆ.ಎಚ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಡಾ. ಎಚ್.ಎಚ್. ಕುಕನೂರ, ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷ ಶಾಂತೇಶ ಕಳಸಗೊಂಡ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಬಸವರಾಜ, ಫಕೀರೇಶ ಮುಡಿಯಣ್ಣವರ, ನಾಗಪ್ಪ ಬೆಂತೂರ, ಅನ್ನಪೂರ್ಣ ಸಂಗಳದ, ಮೀನಾಕ್ಷಿ ಮೆಡ್ಲೇರಿ, ಪುಷ್ಪಾ ಹಂಜಗಿ ಸೇರಿದಂತೆ ಹಲವರಿದ್ದರು.

ವಿವಿಧೆಡೆಯಿಂದ ಆಗಮಿಸಿದ್ದ ಮಕ್ಕಳು ಮಕ್ಕಳ ಹಬ್ಬದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಮಕ್ಕಳ ಹಬ್ಬವು ನವೆಂಬರ್‌ ಅಂತ್ಯದ ವರೆಗೂ ನಡೆಯಲಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಕೇಂದ್ರ ಕಚೇರಿಗೆ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು ಮಕ್ಕಳಿಗೆ ವಿಶೇಷ ಸೆಲ್ಫಿ ಸ್ಟ್ಯಾಂಡ್‌ ಅಳವಡಿಸಲಾಗಿದೆ.