ಸಾರಾಂಶ
- ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಸಾಧನ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್ ವಾರ್ಷಿಕೋತ್ಸವ, ಗುರುವಂದನೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಅನ್ನದಾನದ ಜೊತೆಗೆ ಅಂಧ ಮಕ್ಕಳಿಗೆ ಸಂಗೀತಾಭ್ಯಾಸಕ್ಕೆ ಅನುಕೂಲವಾಗುವಂತೆ ವೀಣೆ, ಕೊಳಲು ಸೇರಿದಂತೆ ಸಂಗೀತ ಪರಿಕರ ನೀಡಬೇಕು. ಆ ಮೂಲಕ ಅವರು ಸಂಗೀತದಲ್ಲಿ ಸಾಧನೆ ಮಾಡಿ, ತಮ್ಮ ಅನ್ನವನ್ನು ತಾವೇ ಗಳಿಸುವಂತೆ ಪ್ರೋತ್ಸಾಹಿಸಬೇಕು ಎಂದು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ನೂತನ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಹೇಳಿದರು.
ನಗರದ ಹೊರವಲಯದ ಬಾಡಾ ಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಸಾಧನ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್‌ನ 6ನೇ ವಾರ್ಷಿಕೋತ್ಸವ, ಗುರುವಂದನೆ ಹಾಗೂ ಡಾ.ಪುಷ್ಪಲತಾ ಪವಿತ್ರರಾಜರ ಹುಟ್ಟುಹಬ್ಬ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಮಾನ್ಯವಾಗಿ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಅಥವಾ ತಮ್ಮ ಹಿರಿಯರ ನೆನಪಿನಲ್ಲಿ ಅಂಧ ಮಕ್ಕಳು, ವಿಕಲಚೇತನ ಮಕ್ಕಳು, ವೃದ್ಧಾಶ್ರಮಗಳು, ಅನಾಥಾಲಯಗಳಿಗೆ ಅನ್ನ ದಾಸೋಹ ಮಾಡುವ ಮಾನವೀಯ ಸೇವೆಯನ್ನು ಜನರು ಮಾಡುತ್ತಾರೆ. ಅದೇ ರೀತಿ ಅಂಧ ಮಕ್ಕಳಿಗೆ ಸಂಗೀತ ಪರಿಕರ ಕೊಡಿಸುವುದು, ವಿಕಲಚೇತನ ಮಕ್ಕಳಿಗೆ ಅಗತ್ಯ ಸಲಕರಣೆಗಳು, ಪರಿಕರ, ವಯೋವೃದ್ಧರಿಗೆ ಹಾಸಿಗೆ, ಹೊದಿಗೆ, ಬಟ್ಟೆ, ಸ್ವೆಟರ್, ಕ್ಯಾಪ್ ಹೀಗೆ ಅಗತ್ಯ ವಸ್ತು ಒದಗಿಸಿದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ ಎಂದು ಅವರು ತಿಳಿಸಿದರು.
ಪುಷ್ಪಲತಾ ನಿಸ್ವಾರ್ಥ ಸೇವೆ:ಸಾನಿಧ್ಯ ವಹಿಸಿದ್ದ ಚಿತ್ರದುರ್ಗ ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಸಂಸ್ಕಾರ, ಸದ್ಗುಣಗಳನ್ನು ಬಿತ್ತುವ ಕೆಲಸ ಮಾಡಬೇಕು. ಸಾಧನ ಟ್ರಸ್ಟ್ ಮೂಲಕ ಪುಷ್ಪಲತಾ ನಿಸ್ವಾರ್ಥ ಸೇವೆ ಮಾಡುವ ಇತರರಿಗೂ ಪ್ರೇರಣೆಯಾಗಿದ್ದಾರೆ. ತುರ್ಚಘಟ್ಟದ ಬಳಿ ದಾನಿಗಳು, ಸಹೃದಯಿಗಳಿಂದ ನೆರವು ಪಡೆದು, ಸ್ವಂತ ಕಟ್ಟಡ ಕಟ್ಟಿಸುತ್ತಿದ್ದಾರೆ. ಅಲ್ಲಿ ವಯೋವೃದ್ಧರು, ಅಸಹಾಯಕ ಮಹಿಳೆಯರಿಗೆ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.
ಸೇವೆಗೆ ಸಂಪೂರ್ಣ ಸಹಕಾರ:ಶ್ರೀ ಬಸವೇಶ್ವರ ಟ್ರಾನ್ಸಪೋರ್ಟ್ ಮಾಲೀಕ, ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಮಹಾಂತೇಶ ವಿ. ಒಣರೊಟ್ಟಿ ಮಾತನಾಡಿ, ಪುಷ್ಪಲತಾ ಪವಿತ್ರರಾಜ ವೃದ್ಧಾಶ್ರಮವನ್ನು ಎಷ್ಟು ಕಷ್ಟಪಟ್ಟು ನಡೆಸುತ್ತಿದ್ದಾರೆಂಬ ಅರಿವು ನಮಗಿದೆ. ಈವರೆಗೆ ಖಾಸಗಿ ಜಾಗದಲ್ಲಿದ್ದ ವೃದ್ಧಾಶ್ರಮಕ್ಕೆ ಸ್ವಂತ ಜಾಗ ಖರೀದಿಸಿ, ಅಲ್ಲಿ ಹೊಸ ಕಟ್ಟಡ ನಿರ್ಮಿಸುತ್ತಿದ್ದಾರೆ. ಅಲ್ಲಿರುವ ವಯೋವೃದ್ಧರು, ಅಸಹಾಯಕ ಮಹಿಳೆಯರ ಪಾಲಿಗೆ ಸ್ವಂತದವರು ಮಾಡದಷ್ಟು ಸೇವೆ ಮಾಡುತ್ತಿದ್ದಾರೆ. ಪುಷ್ಪಲತಾ ಅವರಿಗೆ ತವರು ಮನೆಯಂತೆ ನಾವೆಲ್ಲರೂ ನಿಂತಿದ್ದು, ನಿಮ್ಮೆಲ್ಲಾ ಸೇವೆಗೆ ನಮ್ಮ ಸಹಕಾರ ಇದೆ ಎಂದು ಭರವಸೆ ನೀಡಿದರು.
ಯುವ ಮುಖಂಡ ಎಚ್.ಎಸ್. ನಾಗರಾಜ ಮಾತನಾಡಿ, ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಜೀವಗಳಿಗೆ ಆಶ್ರಯ ಕಲ್ಪಿಸುವ ಮೂಲಕ ಪುಷ್ಪಲತಾ ಅವರು ಬದುಕಿನ ಬಗ್ಗೆ ಭರವಸೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ವೃದ್ಧಾಶ್ರಮದಲ್ಲಿರುವ ಪ್ರತಿಯೊಬ್ಬರಿಗೂ ಕುಟುಂಬದ ಸದಸ್ಯರಂತೆ ಆರೈಕೆ ಮಾಡುವ ಮೂಲಕ ಮಾತೃಸ್ಥಾನದಲ್ಲಿ ನಿಂತಿದ್ದಾರೆ ಎಂದರು.ಚಿಕ್ಕಮಗಳೂರು ವಿಶ್ವಧರ್ಮ ಪೀಠದ ಡಾ.ಜಯ ಬಸವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಟ್ರಸ್ಟ್‌ನ ರಾಜ್ಯಾಧ್ಯಕ್ಷೆ ಡಾ.ಪುಷ್ಪಲತಾ ಪವಿತ್ರರಾಜ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಜಾನಪದ ಕಲಾವಿದ ಸಿದ್ದನಮಠದ ಯುಗಧರ್ಮ ರಾಮಣ್ಣ, ಸಾಹಿತಿ ಕೋಗಲೂರು ಡಾ.ಸೈಯದ್, ಸಮಾಜ ಸೇವಕ ದೊಡ್ಡಬಾತಿ ರವಿಕುಮಾರ, ಪುಣ್ಯಾಶ್ರಮದ ಡಾ. ಜೆ.ಎನ್. ಕರಿಬಸಪ್ಪ ಜಾಲಿಮಠದ, ಅಭಾವೀಮ ಕಾರ್ಯದರ್ಶಿ ರಶ್ಮಿ ನಾಗರಾಜ ಕುಂಕೋದ್, ಭರಮಸಾಗರ ಮಂಜುನಾಥ, ಚಿತ್ರದುರ್ಗದ ಹಾಸ್ಯ ಸಾಹಿತಿ ಜಗನ್ನಾಥ, ಹಿರಿಯ ವಕೀಲ ಎನ್.ಎಂ.ಆಂಜನೇಯ ನೀಲಾನಹಳ್ಳಿ, ಹಿರಿಯ ಪತ್ರಕರ್ತರಾದ ಎ.ಎಲ್.ತಾರಾನಾಥ, ಸಿಕಂದರ್, ನಿಂಗರಾಜ, ರಾಮಪ್ರಸಾದ ಇತರರು ಇದ್ದರು.
- - - ಕೋಟ್ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪದಗ್ರಹಣ ಸಮಾರಂಭವು ಆಗಸ್ಟ್‌ನಲ್ಲಿ ನಡೆಯಲಿದೆ. ಜುಲೈ 16ರಂದು ಚುನಾವಣೆ ನಡೆದಿದ್ದು, ಪದಗ್ರಹಣ ಸಮಾರಂಭಕ್ಕೆ ದೇವರ ಸಮಾನರಾದ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳಿಗೆ ಪ್ರಪ್ರಥಮವಾಗಿ ಆಹ್ವಾನಿಸುತ್ತಿದ್ದೇವೆ. ಲಿಂಗೈಕ್ಯ ಪುಟ್ಟರಾಜ ಗವಾಯಿಗಳ ನೆರಳಿನಡಿ ಬಾಳುತ್ತಿರುವ ಅಂಧ ಮಕ್ಕಳು ಅಂದು ವಚನ ಗಾಯನದ ಮೂಲಕ ಸಮಾರಂಭ ಯಶಸ್ವಿಗೊಳಿಸುವಂತೆ ಕೂಟದ ಪರವಾಗಿ ಮನವಿ ಮಾಡುತ್ತಿದ್ದೇವೆ. ವಿಶೇಷವಾಗಿ ಈ ವೇದಿಕೆಯಿಂದ ಆಹ್ವಾನಿಸುತ್ತಿದ್ದೇವೆ- ನಾಗರಾಜ ಎಸ್. ಬಡದಾಳ್, ಜಿಲ್ಲಾಧ್ಯಕ್ಷ
- - - -20ಕೆಡಿವಿಜಿ1, 2:ದಾವಣಗೆರೆ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಸಾಧನ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್‌ನ 6ನೇ ವಾರ್ಷಿಕೋತ್ಸವ ಸಮಾರಂಭ ಚಿತ್ರದುರ್ಗ ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಚಿಕ್ಕಮಗಳೂರಿನ ಡಾ.ಜಯಬಸವಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಿತು.