ವಿಕಲಚೇನರು ಸ್ವಾವಲಂಬಿಯಾಗಲು ಪ್ರೋತ್ಸಾಹಿಸಿ

| Published : Aug 31 2024, 01:33 AM IST

ಸಾರಾಂಶ

20 ರಿಂದ 60 ವರ್ಷ ವಯೋಮಾನದ ತೀವ್ರತರನಾದ ದೈಹಿಕ ವಿಕಲಚೇತನರಿಗೆ ದ್ವಿಚಕ್ರ ವಾಹನ ಸೌಲಭ್ಯ ಕಲ್ಪಿಸಲಾಗುವುದು. ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಗಳಿಗಿಂತ ಕಡಿಮೆ ಇರಬೇಕು. ಅವರ ಜೀವತಾವಧಿಯಲ್ಲಿ ಒಂದು ಬಾರಿ ಈ ಸೌಲಬ್ಯ ಪಡೆಯಬಹುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ವಿಕಲಚೇತನ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು.ಅಂಗವೈಕಲ್ಯ ಹೊಂದಿದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮೂರು ಚಕ್ರದ ವಾಹನವನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ವಿಕಲಚೇತನ ಫಲಾನುಭವಿಗಳಿಗೆವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ,ಮಾತನಾಡಿ, ಅಂಗವಿಕಲರ ಮೇಲೆ ನಮಗೆ ಕರುಣೆ ಇರಬಾರದು. ಬದಲಾಗಿ ನಾವು ಅವರಿಗೆ ಧೈರ್ಯ ತುಂಬುವ ಮೂಲಕ ಸ್ವಂತವಾಗಿ ದುಡಿಮೆ ಮಾಡುವ ಶಕ್ತಿ ನೀಡಬೇಕೆಂಬ ದೃಷ್ಟಿಯಲ್ಲಿ ವಾಹನಗಳನ್ನು ನೀಡಿದ್ದೇವೆ ಎಂದು ಹೇಳಿದರು. 20 ರಿಂದ 60 ವರ್ಷ ವಯೋಮಾನದ ತೀವ್ರತರನಾದ ದೈಹಿಕ ವಿಕಲಚೇತನರಿಗೆ ದ್ವಿಚಕ್ರ ವಾಹನ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಗಳಿಗಿಂತ ಕಡಿಮೆ ಇರಬೇಕು. ದ್ವಿ-ಚಕ್ರ ವಾಹನ ಸೌಲಭ್ಯ ಪಡೆದ ಫಲಾನುಭವಿಯು ಅವರ ಜೀವತಾವಧಿಯಲ್ಲಿ ಒಂದು ಬಾರಿ ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ ಎಂದರು.

ಈ ವೇಳೆ 9 ವಿಕಲಚೇತನ ವ್ಯಕ್ತಿಗಳಿಗೆ ದ್ವಿ-ಚಕ್ರವಾಹನ (ಎರಡು ಹೆಚ್ಚುವರಿ ಚಕ್ರಗಳು ಒಳಗೊಂಡಂತಹ)ವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಂಗ ವಿಕಲರ ಕಲ್ಯಾಣಾಧಿಕಾರಿ ಎನ್. ಎಂ ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೆಂಕಟೇಶ್ ರೆಡ್ಡಿ, ತಾಪಂ ಇಒ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರು ಇದ್ದರು.