ಸಾರಾಂಶ
ಯುವ ಪೀಳಿಗೆ ಮೊಬೈಲ್ ಗೀಳಿಗೆ ದಾಸರಾಗುತ್ತಿರುವ ಪ್ರಸ್ತುತ ಕಾಲ ಘಟ್ಟದಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಅಗತ್ಯವಾಗಿದೆ ಎಂದು ಶಿಕ್ಷಕ ಮಹಾಂತೇಶ ಹೇಳಿದರು.
ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು
ಯುವ ಪೀಳಿಗೆ ಮೊಬೈಲ್ ಗೀಳಿಗೆ ದಾಸರಾಗುತ್ತಿರುವ ಪ್ರಸ್ತುತ ಕಾಲ ಘಟ್ಟದಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಅಗತ್ಯವಾಗಿದೆ ಎಂದು ಶಿಕ್ಷಕ ಮಹಾಂತೇಶ ಹೇಳಿದರು.ತಾಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ಗುರುನಾಥ್ ಒಳಾಂಗಣ ಕ್ರೀಡಾಂಗಣದಲ್ಲಿ ಶ್ರೀ ಬಸವೇಶ್ವರ ಬ್ಯಾಡ್ಮಿಂಟನ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆ ಕ್ರೀಡೆಗಳನ್ನು ಮರೆತು ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ಇದರಿಂದಾಗಿ ಮಾನಸಿಕ ಏಕಾಗ್ರತೆಯಿಂದ ದೂರವಾಗುತ್ತಿದ್ದಾರೆ. ಪ್ರತಿಯೊಬ್ಬರೂ ಸದೃಢವಂತರಾಗಿ ಬಾಳಬೇಕಾದರೆ ಕ್ರೀಡೆಗಳು ಅಗತ್ಯವಾಗಿವೆ. ಗ್ರಾಮೀಣ ಭಾಗದಲ್ಲಿ ಕ್ರೀಡಾ ಕೂಟಗಳನ್ನು ಆಯೋಜಿಸಿ ಯುವಕರಿಗೆ ಉತ್ಸಾಹ ತುಂಬುವ ಕಾರ್ಯವಾಗಬೇಕು. ಯುವಕರು ಮೊಬೈಲ್ ಗೀಳಿಗೆ ಬೀಳದೇ ಕ್ರೀಡಾಸಕ್ತರಾಗಬೇಕೆಂದು ತಿಳಿಸಿದರು.ಇದೇ ವೇಳೆ ಬಸವೇಶ್ವರ ಬ್ಯಾಡ್ಮಿಂಟನ್ ಕ್ಲಬ್ ನಿರ್ದೇಶಕ ಬಿ.ತಿಪ್ಪೇಸ್ವಾಮಿ ಬದಲಾದ ಆಹಾರ ಪದ್ಧತಿ ಮತ್ತು ಬದಲಾದ ದಿನಚರಿಯಿಂದಾಗಿ ದೈಹಿಕ ಒತ್ತಡಕ್ಕೆ ಒಳಗಾಗಿ ನಾನಾ ಸಮಸ್ಯೆಗಳನ್ನು ಎದುರಿಸುವಂತ ಸಂದಿಗ್ಧ ಸ್ಥಿತಿಯಲ್ಲಿರುವ ನಮಗೆ ಕ್ರೀಡೆಗಳು ಅತ್ಯವಶ್ಯಕವಾಗಿದೆ.ಗ್ರಾಮೀಣ ಭಾಗದಲ್ಲಿ ಆಯೋಜಿಸಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಕ್ಲಬ್‌ನ ಸದಸ್ಯರ ಪರಸ್ಪರ ಸಹಕಾರದಿಂದಾಗಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ನೆರವೇರಿಸಿದ್ದೇವೆ. ಎಲ್ಲರ ಸಹಕಾರ ಹೀಗೆಯೇ ಇರಲಿ ಎಂದರು.ಈ ವೇಳೆ ದಾವಣಗೆರೆಯ ಅಭಿಷೇಕ್ ತಂಡ ಪ್ರಥಮ ಸ್ಥಾನ, ಬಿ.ಜಿ.ಕೆರೆ ದ್ವಿತೀಯ, ರಾಂಪುರ ತೃತೀಯ ಸ್ಥಾನ ಪಡೆಯಿತು. ಕ್ಲಬ್‌ನ ಅಧ್ಯಕ್ಷ ಡಾ.ಬಾಬು ರೆಡ್ಡಿ, ಗೌರವ ಅಧ್ಯಕ್ಷ ಎಂ.ಪಿ.ನಾಗರಾಜ, ಕಾರ್ಯದರ್ಶಿ ಡಿ.ಪಿ.ಬಸವರಾಜ, ಖಜಾಂಚಿ ಇರ್ಫಾನ್ ಸೇರಿದಂತೆ ಸದಸ್ಯರು ಇದ್ದರು.