ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಬಣಜಿಗ ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿದ್ದು, ಅವರನ್ನು ಗುರುತಿಸಿ, ಸಮಾಜದ ವತಿಯಿಂದ ಸಹಾಯ ಸಹಕಾರ ನೀಡುವ ಮೂಲಕ ಪ್ರೊತ್ಸಾಹಿಸಬೇಕು. ಸಮಾಜ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸಿ ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡಬೇಕು. ಅಂತಹ ಕೆಲಸವನ್ನು ಮುಧೋಳ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಮಾಡುತ್ತಿರುವುದಕ್ಕೆ ಅಭಿನಂದಿಸುವುದಾಗಿ ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಮುಧೋಳ ತಾಲೂಕು ಘಟಕದ ವತಿಯಿಂದ ಭಾನುವಾರ ಸ್ಥಳೀಯ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾಡಿನಾದ್ಯಂತ ಬಣಜಿಗ ಸಮಾಜ ಕಟ್ಟಿ ಬೆಳೆಸುವ ಕೆಲಸ-ಕಾರ್ಯವನ್ನು ಸಮಾಜ ಬಾಂಧವರು ಮಾಡಬೇಕು. ಸಮಾಜದ ಕ್ಷೇಮಾಭಿವೃದ್ಧಿಗಾಗಿ ರಾಜಕೀಯ ಮಾಡದೆ, ಎಲ್ಲರೂ ಒಂದುಗೂಡಿ ಶ್ರಮಿಸಬೇಕು. ಆಗಲೇ ಸಮಾಜ ಉನ್ನತ ಸ್ಥಾನಕ್ಕೆ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ತಾವು ಕಾರ್ಯಪ್ರವೃತ್ತರಾಗಬೇಕು. ಸಮಾಜ ಕೆಲಸಕ್ಕೆ ತಮ್ಮನ್ನು ಯಾವುದೇ ಸಂದರ್ಭದಲ್ಲೂ ಅಹ್ವಾನಿಸಿದರೆ ನಾನು ಎಲ್ಲ ಕೆಲಸ ಬದಿಗೊತ್ತಿ ಬಂದು ಸಹಾಯ, ಸಹಕಾರ ನೀಡುತ್ತೇನೆ. ಬಣಜಿಗ ಸಮಾಜ ಬಾಂಧವರು ಪ್ರತಿಭಾವಂತರು, ಸ್ವಾಭಿಮಾನಿಗಳು, ಧರ್ಮವಂತರು, ನೀತಿವಂತರು, ಪರೋಪಕಾರ ಮಾಡುವ ಸ್ವಭಾವದವರು. ತಾವು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಇತರೆ ಸಮಾಜಕ್ಕೆ ಮಾದರಿಯಾಗಬೇಕೆಂದು ಹೇಳಿದರು.
ಮುಧೋಳ ಗವಿಮಠ-ವಿರಕ್ತಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬಣಜಿಗ ಶೆಟ್ರು ಅಲ್ಲ, ಅವರು ಶ್ರೇಷ್ಠರು ಎಂದು ಹೇಳಿದರು. ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಸಾಂದರ್ಭಿಕವಾಗಿ ಮಾತನಾಡಿದರು. ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹಾದೇವ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ ನಿರ್ದೇಶಕ ರವೀಂದ್ರ ಕೋರೆ ಹಾಗೂ ಕದಳಿ ಮಹಿಳಾ ವೇದಿಕೆ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ವಿಶೇಷ ಉಪನ್ಯಾಸ ನೀಡಿದರು. ಮುಧೋಳ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರಾಚಪ್ಪಣ್ಣ ಕರೆಹೊನ್ನ, ಬಣಜಿಗ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ರಾಮತೀರ್ಥ, ಬಣಜಿಗ ಸಮಾಜ ನೌಕರರ ಘಟಕದ ಅಧ್ಯಕ್ಷ ರವೀಂದ್ರ ಕೋಲ್ಹಾರ, ಬಣಜಿಗ ಸಮಾಜ ಯುವ ಘಟಕದ ಅಧ್ಯಕ್ಷ ವೀರೇಶ ಕಲಾದಗಿ, ಬಣಜಿಗ ಸಮಾಜ ಲೋಕಾಪುರ ಘಟಕದ ಅಧ್ಯಕ್ಷ ಬಸವರಾಜ ಅಂಗಡಿ, ಈಶ್ವರ ಕತ್ತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಸಮಾಜದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸಂಗಮೇಶ ನೀಲಗುಂದ ಸ್ವಾಗತಿಸಿದರು. ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಸುಗುರೆಪ್ಪ ಅಕ್ಕಿಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಬಾಂಧವರು ಉಪಸ್ಥಿತರಿದ್ದರು.ಬಹುತೇಕ ಎಲ್ಲ ಭಾಗದಲ್ಲೂ ಬಣಜಿಗ ಸಮಾಜದವರು ಇದ್ದಾರೆ. ಅವರು ತಮ್ಮ ವ್ಯಾಪಾರ ವಹಿವಾಟು ಜೊತೆಗೆ ಇತರರ ಕಷ್ಟ ನಷ್ಟಗಳಿಗೆ, ನೋವು, ನಲಿವುಗಳಿಗೆ ಸ್ಪಂದಿಸುವ ಸ್ವಭಾವ ಹೊಂದಿದ್ದಾರೆ. ಹೀಗಾಗಿ ನಾನು ಬಣಜಿಗ ಸಮಾಜದವರ ಜೊತೆ ನಿಕಟ ಸಂಪರ್ಕ ಮತ್ತು ಸಂಬಂಧ ಹೊಂದಿದ್ದೇನೆ. ಕರ್ನಾಟಕ ರಾಜ್ಯದಲ್ಲಿ ಬಣಜಿಗ ಸಮಾಜಕ್ಕೆ ಸೇರಿರುವ 7 ಜನ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ನೆನಪಿಸಿಕೊಂಡು ತಾವು ಎಲ್ಲ ಕ್ಷೇತ್ರದಲ್ಲೂ ಇರಬೇಕೆಂದರು.- ಗೋವಿಂದ ಕಾರಜೋಳ ಮಾಜಿ ಡಿಸಿಎಂ, ಚಿತ್ರದುರ್ಗ ಸಂಸದ