ದುಗ್ಗಾವತ್ತಿಯಲ್ಲಿ ಗ್ರಂಥಾಲಯಕ್ಕೆ ₹25 ಲಕ್ಷ ಮಂಜೂರಾಗಿದೆ, ಸೂಕ್ತ ನಿವೇಶನ ಗುರುತಿಸಿ ಎಂದು ಹೇಳಿದರು. ಕೆಕೆಆರ್‌ ಡಿ ಬಿ ಅಡಿ ಬರುತ್ತಿರುವ ಸಾಕಷ್ಟು ಅನುದಾನ ಸದುಪಯೋಗವಾಗುತ್ತಿದೆ

ಹರಪನಹಳ್ಳಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಈವರೆಗೂ ಸಾಕಷ್ಟು ಅನುದಾನ ತಂದಿದ್ದು, ಹರಪನಹಳ್ಳಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವನೇ ನಡೆದಿದೆ, ಕೆಲಸ ಮಾಡುವವರಿಗೆ ಪ್ರೋತ್ಸಾಹ ಕೊಡಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ.

ಅವರು ತಾಲೂಕಿನ ದುಗ್ಗಾವತ್ತಿ ಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸೋಮವಾರ ಮಾತನಾಡಿದರು.

ರಸ್ತೆ ಅಭಿವೃದ್ಧಿ ಆಗುವಾಗ ತಾವು ಮಾಡಿಕೊಂಡಿರುವ ಒತ್ತುವರಿಯನ್ನು ಸ್ವಯಂ ಆಗಿ ತಾವೇ ತೆರವು ಮಾಡಿಕೊಳ್ಳಿ ಎಂದು ನಾಗರಿಕರಿಗೆ ತಿಳಿಸಿದರು.

ದುಗ್ಗಾವತ್ತಿಯಲ್ಲಿ ಗ್ರಂಥಾಲಯಕ್ಕೆ ₹25 ಲಕ್ಷ ಮಂಜೂರಾಗಿದೆ, ಸೂಕ್ತ ನಿವೇಶನ ಗುರುತಿಸಿ ಎಂದು ಹೇಳಿದರು. ಕೆಕೆಆರ್‌ ಡಿ ಬಿ ಅಡಿ ಬರುತ್ತಿರುವ ಸಾಕಷ್ಟು ಅನುದಾನ ಸದುಪಯೋಗವಾಗುತ್ತಿದೆ ಎಂದು ಹೇಳಿದರು.

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ವರ್ಷಕ್ಕೆ ನನಗೆ ₹5 ಕೋಟಿ ಅನುದಾನ ಮಾತ್ರ ಬರುತ್ತಿದ್ದು, ಹರಪನಹಳ್ಳಿ ಕ್ಷೇತ್ರಕ್ಕೆ ₹50 ಲಕ್ಷ ಅನುದಾನ ಈವರೆಗೂ ನೀಡಿದ್ದೇನೆ. ಹರಪನಹಳ್ಳಿ ಭಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರ ತೆರೆಯಲು ಪ್ರಸ್ಥಾವನೆ ಸಲ್ಲಿಸಿದ್ದೇನೆ, ಕೊಟ್ಟೂರು-ಹರಿಹರ ರೈಲ್ವೆಯಲ್ಲಿ ಶೌಚಾಲಯ ಸ್ಥಾಪನೆಗೆ ಸಹ ಪ್ರಸ್ಥಾವನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಕಾಮಾಗಾರಿಗಳು ಗುಣಮಟ್ಟದ್ದಾಗಿರಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಅದರಲ್ಲೂ ಗ್ಯಾರಂಟಿ ಯೋಜನೆಗಳು ಮನೆ ಮಾತಾಗಬೇಕು ಎಂದು ತಿಳಿಸಿದರು.

ಜೋಡೆತ್ತಿನ ರೀತಿ ಕೆಲಸ : ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಶಾಸಕಿ ಎಂ.ಪಿ.ಲತಾಮಲ್ಲಿಕಾರ್ಜುನ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಜೋಡೆತ್ತಿನ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ, ಪ್ರತಿ ಗ್ರಾಪಂನಲ್ಲಿ ₹30-40 ಕೋಟಿ ಅಭಿವೃದ್ಧಿ ಕೆಲಸಗಳಾಗಿವೆ, ಜನರ ಭಾವನೆಗಳಿಗನುಗುಣವಾಗಿ ಲೋಕಸಭೆಯಲ್ಲಿ ಹಾಗೂ ವಿಧಾನಸಭೆಯಲ್ಲಿ ಶಾಸಕರು ಹಾಗೂ ಸಂಸದರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಮಾತನಾಡಿದರು. ಪಿಕಾರ್ಡ ಬ್ಯಾಂಕ್‌ ನಿರ್ದೆಶಕ ಲಾಟಿದಾದಾಪೀರ, ಮುಖಂಡ ವಸಂತಪ್ಪ, ಮಂಜುನಾಥ, ಮಲ್ಲಿಕಾರ್ಜುನ ಸ್ವಾಮಿ ಕಲ್ಮಟ, ನಿಂಗನಗೌಡ,ಎಇಇ ರಾಘವೇಂದ್ರ ಉಪಸ್ಥಿತರಿದ್ದರು.