ಸಾರಾಂಶ
ತಿಪಟೂರು: ಪೌಷ್ಟಿಕಯುಕ್ತ ಆಹಾರ ಸೇವಿಸುವ ಮೂಲಕ ಅಪೌಷ್ಟಿಕತೆಯನ್ನು ಹೋಗಲಾಡಿಸಬೇಕು ಎಂದು ನ್ಯಾಯಾಧೀಶ ಸಿ.ಎಫ್.ಮಹಮ್ಮದ್ ಆರಿಫುಲ್ಲ ಹೇಳಿದರು.
ನಗರದ ಶಿಕ್ಷಣ ಸಮನ್ವಯ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಾವಯವ ಕೃಷಿ ಆಧಾರಿತ ಆಹಾರ ಸೇವನೆ, ಸತ್ವಭರಿತ ಆಹಾರ, ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಅಪೌಷ್ಟಿಕತೆಯನ್ನು ತೊಡೆದು ಹಾಕಬಹುದು. ಮಕ್ಕಳಿಗೆ ಪಿಜ್ಜಾ, ಬರ್ಗರ್ ಸೇರಿದಂತೆ ಬೀದಿಬದಿ ಆಹಾರಗಳನ್ನು ಕೊಡುವ ಬದಲು ಮನೆಯಲ್ಲಿಯೇ ಮೊಳಕೆ ಕಾಳು, ಸೊಪ್ಪು, ತರಕಾರಿಗಳನ್ನು ನೀಡಬೇಕು. ತಾಯಂದಿರು ಮಕ್ಕಳಿಗೆ ಎದೆಹಾಲನ್ನು ಕನಿಷ್ಠ ಎರಡು ವರ್ಷಗಳ ಕಾಲ ನೀಡುವುದರಿಂದ ಅಪೌಷ್ಟಿಕತೆಯನ್ನು ನಿಮೂರ್ಲನೆ ಮಾಡಬಹುದು ಎಂದು ತಿಳಿಸಿದರು.
ನ್ಯಾಯಾಧೀಶೆ ಜಿ.ಎಸ್.ಮಧುಶ್ರೀ ಮಾತನಾಡಿ, ಮಾನವನ ಜೀವನದಲ್ಲಿ ಸಾತ್ವಿಕ ಆಹಾರ ಪದ್ಧತಿಗಳಾದ ನೀರು, ನಾರು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಪ್ರೋಟೀನ್‌ಯುಕ್ತ ಆಹಾರ ಸೇವಿಸಬೇಕು. ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ವ್ಯವಸ್ಥಿತಿವಾಗಿ ಸೇವಿಸಿದರೆ ರೋಗಳಿಂದ ದೂರ ಉಳಿಯಬಹುದು. ಇದರಿಂದ ಉತ್ತಮ ಆರೋಗ್ಯ, ಆಯಸ್ಸು ಹೆಚ್ಚಲಿದೆ. ಪ್ರತಿನಿತ್ಯ ದಿನಕ್ಕೆ ಎರಡರಿಂದ ಮೂರು ಲೀಟರ್ ನೀರನ್ನು ಸೇವಿಸುವುದರಿಂದ ದೇಹದಲ್ಲಿ ಅತ್ಯಧಿಕವಾಗುವ ಕೊಬ್ಬಿನ ಅಂಶ ಕಡಿಮೆಯಾಗಲಿದೆ ಎಂದರು.ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಂ.ಸಿ.ನಟರಾಜು ಮಾತನಾಡಿ, ನಮ್ಮ ಪೂರ್ವಜರು ಆಯಾ ಕಾಲಕ್ಕೆ ಅನುಗುಣವಾಗಿ ದೈಹಿಕ ಅವಶ್ಯಕವಾದ ಸತ್ವಭರಿತ ಆಹಾರ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದರು. ಪ್ರಸ್ತುತ ನಾವು ಅವುಗಳನ್ನು ಸೇವಿಸದೆ ರಾಸಾಯನಿಕ ಭರಿತ ಆಹಾರ ಸೇವನೆ ಮಾಡುತ್ತಿದ್ದೇವೆ ಎಂದು ಹೇಳಿದರು. ಬಿ.ಮಲ್ಲಿಕಾರ್ಜುನಯ್ಯ, ಮೀನಾಕ್ಷಿ ಬಟೂರ್, ರೂಪ, ಲೀಲಾಬಾಯಿ, ಪಿ.ರೇಖಾ ಇದ್ದರು.