ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಮಹಿಳೆಯರ ಕೌಶಲ್ಯ ಅಭಿವೃದ್ಧಿ ಹಾಗೂ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹಿಸುವುದು ಅತ್ಯಂತ ಅಗತ್ಯವಾಗಿದೆ. ಮಹಿಳೆಯರೂ ಕೂಡ ಒಟ್ಟಾಗಿ ತಮ್ಮ ಜವಾಬ್ದಾರಿ ಅರಿತು ಮುನ್ನಡೆಯಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ ತಿಳಿಸಿದರು.ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಆಯೋಜಿಸಿದ್ದ ಹಾನಗಲ್ಲ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನಲ್ಲಿ ೨೫ ಜ್ಞಾನ ವಿಕಾಸ ಕೇಂದ್ರಗಳನ್ನು ರಚನೆ ಮಾಡಲಾಗಿದೆ. ಇದರಲ್ಲಿ ೨೫೦ಕ್ಕೂ ಅಧಿಕ ಕುಟುಂಬಗಳಿವೆ. ತಮ್ಮ ಕುಟುಂಬದ ನಿರ್ವಹಣೆ ಜೊತೆಗೆ ಇತರರಿಗೆ ನೆರವಾಗುವ ರೀತಿಯಲ್ಲಿ ಮಹಾತ್ವಾಕಾಂಕ್ಷಿ ಜೀವನಕ್ಕೆ ಪ್ರೋತ್ಸಾಹಿಸಲಾಗುವುದು. ಮಹಿಳಾ ಅಭಿವೃದ್ಧಿ ಎಂದರೆ ಅದು ದೇಶದ ಅಭಿವೃದ್ಧಿ. ಇತ್ತೀಚಿನ ದಿನಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸ್ವಾವಲಂಬಿ ಬದುಕಿಗೆ ನಮ್ಮ ಸಂಘಟನೆ ಪ್ರೇರಣೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಇಂತಹ ಪ್ರಗತಿಪರ ಯೋಜನೆ ಮೂಲಕ ಹೊಸ ಬದಲಾವಣೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಎಲ್ಲ ರಂಗದಲ್ಲಿಯೂ ಮಹಿಳೆ ಆರ್ಥಿಕ ಸಾಮಾಜಿಕ ಪ್ರಗತಿಯಲ್ಲಿ ಸಕ್ರಿಯವಾಗಿ ಮುನ್ನಡೆಯುತ್ತಿದ್ದಾಳೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಾಮಾಜಿಕ ಕ್ರಾಂತಿಯನ್ನೇ ಮಾಡುತ್ತಿದ್ದು ಬದಲಾವಣೆಯಲ್ಲಿ ವೇಗದ ಮುನ್ನಡೆಯಲ್ಲಿದೆ ಎಂದರು.ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರ ಪಾಟೀಲ ಮಾತನಾಡಿ, ಮಹಿಳೆಯರ ಸ್ವಾವಲಂಬಿ ಜೀವನದ ಹೆಜ್ಜೆ ಎಂಬ ವಿಚಾರ ಸಂಕಿರಣ ಅತ್ಯಂತ ಅರ್ಥಪೂರ್ಣವಾದುದು. ಈ ಮೂಲಕ ಸ್ವಾವಲಂಬಿ ಜೀವನದ ಮಾರ್ಗದರ್ಶನದಿಂದಾಗಿ ಮಹಿಳೆಯ ಸಬಲೀಕರಣ ಸಾಧ್ಯವಾಗುತ್ತದೆ. ನಾಳೆಗಾಗಿ ಈಗಲೇ ಎಚ್ಚರಗೊಳ್ಳುವ ಅಗತ್ಯವಿದ್ದು ಬದಲಾದ ಕಾಲಕ್ಕೆ ಮಹಿಳೆ ಸಾಮಾಜಿಕವಾಗಿಯೂ ಜವಾಬ್ದಾರಿಯಿಂದ ಜೀವನ ನಡೆಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಂಗೋಲಿ, ಕೋಲಾಟ, ಜಾನಪದ ನೃತ್ಯ, ಫ್ಯಾಶನ್ ಶೋ, ಛದ್ಮ ವೇಷ, ಡ್ರಾಮಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಪಟಗಾರ, ಶಿಕ್ಷಕಿ ಅನಿತಾ ಕಿತ್ತೂರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗಂಗೋತ್ರಿ ಗೌಡ, ಹಾನಗಲ್ಲ ವಲಯ ಮೇಲ್ವಿಚಾರಕಿ ನೇತ್ರಾವತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.