ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ಅಗತ್ಯ-ಎಂ.ಸಿ. ಕೊಳ್ಳಿ

| Published : Jul 18 2024, 01:30 AM IST

ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ಅಗತ್ಯ-ಎಂ.ಸಿ. ಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧಾತ್ಮಕ ಜಗತ್ತಿನ ಓಟಕ್ಕೆ ಸಮನಾಗಿ ಅಧ್ಯಯನ ಮಾಡುವಂತೆ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ. ಸಿ. ಕೊಳ್ಳಿ ಹೇಳಿದರು.

ಹಾವೇರಿ: ಸ್ಪರ್ಧಾತ್ಮಕ ಜಗತ್ತಿನ ಓಟಕ್ಕೆ ಸಮನಾಗಿ ಅಧ್ಯಯನ ಮಾಡುವಂತೆ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ. ಸಿ. ಕೊಳ್ಳಿ ಹೇಳಿದರು. ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ೨೦೨೪-೨೫ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕೆಸಿಇಟಿ, ನೀಟ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮಾನವನ ಬದುಕು ಅಜ್ಞಾನದಿಂದ ಸುಜ್ಞಾನದೆಡೆಗೆ. ಕತ್ತಲೆಯಿಂದ ಬೆಳಕಿನೆಡೆಗೆ, ಭಯದಿಂದ ನಿರ್ಭಯದೆಡೆಗೆ, ಅದರಾಚೆಗೂ ಅಮರತ್ವದೆಡೆಗೆ ಸಾಗುವಂತಾಗಬೇಕು. ಸತ್ಯ ಸಜ್ಜನಿಕೆಯ ಜ್ಞಾನ ಸಂಜೀವಿನಿಯ ಸುಜ್ಞಾನಕ್ಕೆ ಸುವರ್ಣ ಮಾಧ್ಯಮವೆಂದರೆ ಶಿಕ್ಷಣ. ಆ ಜ್ಞಾನಾಮೃತವನ್ನು ಮಕ್ಕಳಿಗೆ ದೊರಕುವಂತೆ ಮಾಡುವ ಜವಾಬ್ದಾರಿ ನಿರಂತರವಾಗಿ ನಮ್ಮ ಸಂಸ್ಥೆ ಮಾಡಿಕೊಂಡು ಬಂದಿದೆ. ಬುದ್ದಿಯ ವಿಕಾಸಕ್ಕೆ ವಿದ್ಯೆಯ ಅವಶ್ಯಕತೆಯಿದೆ. ಒಂದು ಸಣ್ಣ ಬೀಜದಲ್ಲಿ ಬೃಹದಾಕಾರದ ಮರವು ಅಂಕುರಗೊಳ್ಳುವಂತೆ ಆ ಚಿಕ್ಕ ಬೀಜದಲ್ಲಿ ವಿಶಾಲ ಮರದ ಹೂವು, ಹಣ್ಣು, ಕಾಯಿಗಳು ಸತ್ವಯುತವಾಗಿ ಫಲವತ್ತತೆಯನ್ನು ಕೊಡುವಂತಾಗಲು ನೀರು, ಗೊಬ್ಬರ, ಮೊದಲಾದ ಪೂರಕ ಅಂಶಗಳ ಅವಶ್ಯಕತೆ ಇರುವಂತೆ ವಿದ್ಯಾರ್ಥಿಗಳಿಗಾದರೂ ಅಷ್ಟೇ ಕಾಲಕಾಲಕ್ಕೆ ಉಪಯುಕ್ತ ರೀತಿಯಲ್ಲಿ ಜ್ಞಾನ ಸಂಪಾದನೆಗೆ ಅನುಕೂಲಕರ ವಾತಾವರಣ ನಿರ್ಮಿಸುವುದು ಅವಶ್ಯಕವಿದೆ. ಆ ನಿಟ್ಟಿನಲ್ಲಿ ನಮ್ಮ ಕಾಲೇಜು ಪ್ರತಿ ವರ್ಷವೂ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ವಿಭಿನ್ನ ರೀತಿಯ ಜ್ಞಾನಪ್ರಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮವಾದ ಕಲಿಕೆಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ಅತ್ಯುತ್ತಮ ರೀತಿಯಲ್ಲಿ ವಿದ್ಯಾರ್ಥಿಗಳ ಮನೋಸಾಮರ್ಥ್ಯಕ್ಕೆ ಹೆಚ್ಚಿನ ಬಲ ನೀಡುವ ನಿಟ್ಟಿನಲ್ಲಿ ಆಧುನಿಕ ವ್ಯವಸ್ಥೆಗೆ ತಕ್ಕಂತೆ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜು ಕೆ-ಸಿಇಟಿ, ನೀಟ್ ತರಬೇತಿಯನ್ನು ಆಯೋಜಿಸಿ, ವಿದ್ಯಾರ್ಥಿಗಳ ಸಹಜ ಓದಿನೊಟ್ಟಿಗೆ ವಿಶೇಷ ತರಬೇತಿಯನ್ನು ನೀಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಧಾರವಾಡ ಸೂರತ್ಕಲ್ ಎಂ.ಎಸ್. ಪುರ್ಡೆ ವಿವಿಯ ಶಾಖಾ ಕಚೇರಿಯ ಮುಖ್ಯಸ್ಥ ಪ್ರೊ.ಆದರ್ಶ ಪಾಟೀಲ ಮತ್ತು ಧಾರವಾಡದ ವಿಷಯ ತಜ್ಞ ಡಾ. ಗುರುನಾಥ ಜಾಧವ್ ಪಾಲ್ಗೊಂಡಿದ್ದರು. ಪಪೂ ಪ್ರಾಚಾರ್ಯ ಡಾ. ಜೆ. ಆರ್. ಶಿಂಧೆ ಸ್ವಾಗತಿಸಿದರು. ಪ್ರೊ. ಆರ್. ಎಸ್. ರಾಯ್ಕರ್ ಪ್ರಾಸ್ತಾವಿಕ ಮಾತನಾಡಿದರು. ಅವಿಕ್ಷಾರಷ್ಮಿ ಸವಣೂರು ನಿರ್ವಹಿಸಿದರು. ಡಾ. ಶಿವರಾಜ ಮಂಟೂರ ವಂದಿಸಿದರು.