ಒತ್ತುವರಿ ಭೂಮಿ ವಶಕ್ಕೆ ಪಡೆದ ಅರಣ್ಯ, ಕಂದಾಯ ಇಲಾಖೆ

| Published : Jan 12 2024, 01:47 AM IST

ಸಾರಾಂಶ

20-25 ವರ್ಷದ ಹಿಂದೆ ಅರಣ್ಯ ಇಲಾಖೆಗೆ ಸೇರಿದ್ದ ಭೂ ಪ್ರದೇಶವನ್ನು ಅಜ್ಜಿಹಳ್ಳಿ ಗ್ರಾಮದ ರೈತರು, ಮಾವಿನಕಟ್ಟೆ ವಲಯ ಅರಣ್ಯಕ್ಕೆ ಸೇರಿದ ಭೂ ಪ್ರದೇಶವನ್ನು ಒತ್ತುವರಿ ಮಾಡಿದ್ದರು. ಒತ್ತುವರಿ ಮಾಡಿದ ಭೂ ಪ್ರದೇಶವನ್ನು ಬಿಡಿಸಿರಿ ಎಂದು ಸುಣಿಗೆರೆ ಗ್ರಾಮದ ರೈತರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ವಲಯ ಅರಣ್ಯಾಧಿಕಾರಿ ಜಗದೀಶ್ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ಮಾಡಿದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಜಂಟಿ ಕಾರ್ಯಾಚರಣೆ, ಅಡಿಕೆ ಗಿಡಗಳ ಉರುಳಿಸಿ 60 ಎಕರೆ ಭೂಮಿ ಸ್ವಾಧೀನ

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಸುಣಿಗೆರೆ ಗ್ರಾಮದ ವ್ಯಾಪ್ತಿಯ ಸರ್ವೆ ನಂಬರ್ 58, 59 ರಲ್ಲಿ ಅರಣ್ಯ ಇಲಾಖೆಗೆ ಸೇರಿದ್ದ 20 ಮಂದಿ ರೈತರು 60 ಎಕರೆ ಭೂ ಪ್ರದೇಶ ಒತ್ತುವರಿ ಮಾಡಿ ಅಡಿಕೆ ಕೃಷಿ ಮಾಡಿದ್ದರಿಂದ ಬುಧವಾರ ಬೆಳಗ್ಗೆ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ಭೂಮಿಯಲ್ಲಿ ಹಾಕಿದ್ದ ಅಡಿಕೆ ಗಿಡಗಳ ಜೆಸಿಬಿ ಮೂಲಕ ಉರುಳಿಸಿ ಒತ್ತುವರಿ ಪ್ರದೇಶವನ್ನು ವಶಕ್ಕೆಪಡೆದರು.

20-25 ವರ್ಷದ ಹಿಂದೆ ಅರಣ್ಯ ಇಲಾಖೆಗೆ ಸೇರಿದ್ದ ಭೂ ಪ್ರದೇಶವನ್ನು ಅಜ್ಜಿಹಳ್ಳಿ ಗ್ರಾಮದ ರೈತರು, ಮಾವಿನಕಟ್ಟೆ ವಲಯ ಅರಣ್ಯಕ್ಕೆ ಸೇರಿದ ಭೂ ಪ್ರದೇಶವನ್ನು ಒತ್ತುವರಿ ಮಾಡಿದ್ದರು. ಒತ್ತುವರಿ ಮಾಡಿದ ಭೂ ಪ್ರದೇಶವನ್ನು ಬಿಡಿಸಿರಿ ಎಂದು ಸುಣಿಗೆರೆ ಗ್ರಾಮದ ರೈತರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ವಲಯ ಅರಣ್ಯಾಧಿಕಾರಿ ಜಗದೀಶ್ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ಮಾಡಿದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅರಣ್ಯ ಭೂಮಿ ಒತ್ತುವರಿ ಬಗ್ಗೆ ರೈತರಿಗೆ 2-3 ಬಾರಿ ನೋಟಿಸ್ ನೀಡಿದ್ದರೂ ಪ್ರತಿಕ್ರಿಯೆ ನೀಡದ್ದರಿಂದ ಹಾಗೂ ವಿಚಾರಣೆಗೆ ಕರೆದರೂ ಗೈರು ಆಗಿದ್ದರು. ಈ ಎಲ್ಲಾ ಬೆಳವಣಿಗೆ ಗಮನಿಸಿ ಬುಧವಾರ ಬೆಳಗ್ಗೆ ಕಂದಾಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ವಾಧೀನಕ್ಕೆ ಪಡೆದರು.

ರೈತರಿಗೆ ಮೊದಲೇ ನೋಟಿಸ್‌ ಜಾರಿ:

ಸ್ಥಳದಲ್ಲಿ ತಹಸೀಲ್ದಾರ್ ಎರ್ರಿಸ್ವಾಮಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭ, ವಲಯ ಅರಣ್ಯಾಧಿಕಾರಿಗಳಾದ ಜಗದೀಶ್, ಮಧುಸೂಧನ್ ಸೇರಿ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು. ಅರಣ್ಯ ಮತ್ತು ಕಂದಾಯ ಇಲಾಖೆ ಜಾಗಗಳ ಒತ್ತುವರಿ ಮಾಡಿದವರಿಗೆ ಇಂದಲ್ಲಾ ನಾಳೆ ತೆರವು ಮಾಡಲೇಬೇಕು ಎಂದು ಮೊದಲೇ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿತ್ತು ಅದರಂತೆ ರೈತರು ಸಹಕಾರ ನೀಡಿದ್ದಾರೆ ಎಂದು ಸ್ಥಳದಲ್ಲಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭ ತಿಳಿಸಿದರು.