ಹಳಿಯಾಳದಲ್ಲಿ ಅತಿಕ್ರಮಣ ತೆರವು ಕಾರ್ಯ

| Published : May 16 2024, 12:49 AM IST

ಸಾರಾಂಶ

ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವು ಆಗಮಿಸಿ ತೆರವು ಕಾರ್ಯಾಚರಣೆಗೆ ಮುಂದಾಯಿತು. ಈ ಸಂದರ್ಭದಲ್ಲಿ ಬಡಾವಣೆಯ ಮಾಲೀಕರು ಹಾಗೂ ಅಲ್ಲಿನ ಅಂಗಡಿ ವರ್ತಕರ ಮಧ್ಯೆ ವಾಗ್ವಾದ ನಡೆಯಿತು.

ಹಳಿಯಾಳ: ವಸತಿ ಬಡಾವಣೆಯ ಸರ್ವಿಸ್ ರಸ್ತೆಯನ್ನು ಅತಿಕ್ರಮಿಸಿಕೊಂಡು ನಿರ್ಮಿಸಿದ ಅಂಗಡಿಗಳನ್ನು ತೆರವು ಮಾಡುವ ಕಾರ್ಯಾಚರಣೆಯು ಪುರಸಭೆಯಿಂದ ಬುಧವಾರ ಸಂಜೆ ನಡೆಯಿತು.

ಖಾನಾಪುರ- ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿರುವ ಯಲ್ಲಾಪುರ ನಾಕೆಯ ಬಳಿಯಿರುವ ಬಸರಿಕಟ್ಟಿ ಪೆಟ್ರೋಲ್ ಬಂಕ್ ಎದುರಿನ ಪುಂಗಿ ಬಡಾವಣೆಯ ಸರ್ವಿಸ್ ರಸ್ತೆಯ ಅತಿಕ್ರಮಿಸಿಕೊಂಡಿದ್ದನ್ನು ತೆರವುಗೊಳಿಸಬೇಕೆಂದು ಈ ಹಿಂದೆಯೇ ಪುರಸಭೆಯವರು ನೋಟಿಸ್ ನೀಡಿದ್ದರು. ಸರ್ವಿಸ್‌ ಇಲಾಖೆಯವರು ಸ್ಥಳದ ಮೋಜಣಿ ಮಾಡಿ ಅತಿಕ್ರಮಣ ತೆರವುಗೊಳಿಸಬೇಕಿದ್ದ ಸೂಚಿತ ಸ್ಥಳವನ್ನು ಕೆಂಪು ಬಣ್ಣದಿಂದ ಗುರುತು ಮಾಡಿ ತೋರಿಸಿತ್ತು.

ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವು ಆಗಮಿಸಿ ತೆರವು ಕಾರ್ಯಾಚರಣೆಗೆ ಮುಂದಾಯಿತು. ಈ ಸಂದರ್ಭದಲ್ಲಿ ಬಡಾವಣೆಯ ಮಾಲೀಕರು ಹಾಗೂ ಅಲ್ಲಿನ ಅಂಗಡಿ ವರ್ತಕರ ಮಧ್ಯೆ ವಾಗ್ವಾದ ನಡೆಯಿತು. ಉದ್ದೇಶಪೂರ್ವಕವಾಗಿ ನಮ್ಮನ್ನೇ ಗುರಿ ಮಾಡಲಾಗಿದೆ. ಪಟ್ಟಣದಲ್ಲಿ ಸಾಕಷ್ಟು ಅತಿಕ್ರಮಣದ ಪ್ರಕರಣಗಳಿದ್ದರೂ ನಮ್ಮ ಮೇಲೆಯೇ ಬ್ರಹ್ಮಾಸ್ತ್ರ ಏಕೆ ಎಂದು ಪ್ರಶ್ನಿಸಿದರು. ಕಳೆದ ವರ್ಷದ ಜೂನ್ ತಿಂಗಳಿನಿಂದ ನಮ್ಮನ್ನೇ ಟಾರ್ಗೆಟ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಸಂಜೆಯವರೆಗೆ ಕಾಲಾವಕಾಶ: ಬಡಾವಣೆ ಮಾಲೀಕರ ಹಾಗೂ ಅಂಗಡಿ ವರ್ತಕರ ಅಹವಾಲು ಆಲಿಸಿದ ಮುಖ್ಯಾಧಿಕಾರಿ ಅಶೋಕ ಸಾಳೆನ್ನನವರ ಅವರು, ಬಡಾವಣೆಯಲ್ಲಿನ ನೀಲನಕ್ಷೆಯಲ್ಲಿ ತೋರಿಸಿದರು. ಅಲ್ಲದೇ ಸರ್ಕಾರಿ ಸರ್ವಿಸ್ ರಸ್ತೆಯನ್ನು ಅತಿಕ್ರಮಿಸುವುದು ಸರಿಯಲ್ಲ ಎಂದರು.

ಮುಖ್ಯಾಧಿಕಾರಿಗಳ ಮಾತಿಗೆ ಸಹಮತ ವ್ಯಕ್ತಪಡಿಸಿದ ಅಂಗಡಿ ಹಾಗೂ ಗ್ಯಾರೇಜ್ ಮಾಲೀಕರು ಸ್ವತಃ ತೆರವುಗೊಳಿಸಲು ಗುರುವಾರ ಸಂಜೆಯವರೆಗೆ ಅವಕಾಶ ಕಲ್ಪಿಸಬೇಕೆಂದು ಪುರಸಭೆಗೆ ಲಿಖಿತವಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಪುರಸಭೆಯವರು ತೆರವು ಕಾರ್ಯಾಚರಣೆಯನ್ನು ಒಂದು ದಿನ ಮೂಂದೂಡಿದ್ದಾರೆ.

ಪುರಸಭೆಯ ಪರಿಸರ ಇಲಾಖೆಯ ಎಂಜಿನಿಯರ್ ದರ್ಶಿತಾ, ವಸತಿ ನಿವೇಶನ ವಿಭಾಗದ ರಾಮಚಂದ್ರ ಮೋಹಿತೆ, ರಮೇಶ ಮಜುಕರ ಹಾಗೂ ಸಿಬ್ಬಂದಿ ಆಗಮಿಸಿದ್ದರು. ಪುರಸಭಾ ಸದಸ್ಯ ಸಂತೋಷ ಘಟಕಾಂಬ್ಳೆ, ಜೆಡಿಎಸ್ ಮುಖಂಡರಾದ ಗುಲಾಬಷ್ಯಾ ಲತೀಪಣ್ಣನವರ, ನಾರಾಯಣ ಬೆಳಗಾಂವಕರ ಹಾಗೂ ಇತರರು ಉಪಸ್ಥಿತರಿದ್ದರು.