ಶ್ರೀರಂಗಪಟ್ಟಣ ಸೇತುವೆ ಪಕ್ಕ ಕಾವೇರಿ ನದಿಗೆ ಇಟಾಚಿಗಳನ್ನು ಇಳಿಸಿ ಗುಂಡಿಗಳನ್ನು ಮಾಡಿ ಮಣ್ಣನ್ನು ಬಗೆದು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಆ ಮಣ್ಣನ್ನು ಒತ್ತುವರಿ ಮಾಡಿಕೊಂಡು ಜಮೀನುಗಳ ಅಥವಾ ಕಟ್ಟಡ ಕಟ್ಟಲು ಬಳಕೆ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜೀವನದಿ ಕಾವೇರಿ ನದಿಯನ್ನೇ ಮುಚ್ಚಿ ಒತ್ತುವರಿ ಮಾಡಿಕೊಳ್ಳುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ ಎಂದು ರೈತ ಸಂಘದ ಮುಖಂಡ ಕಿರಂಗೂರು ಪಾಪು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶ್ರೀರಂಗಪಟ್ಟಣ ಸೇತುವೆ ಪಕ್ಕ ಕಾವೇರಿ ನದಿಗೆ ಇಟಾಚಿಗಳನ್ನು ಇಳಿಸಿ ಗುಂಡಿಗಳನ್ನು ಮಾಡಿ ಮಣ್ಣನ್ನು ಬಗೆದು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಆ ಮಣ್ಣನ್ನು ಒತ್ತುವರಿ ಮಾಡಿಕೊಂಡು ಜಮೀನುಗಳ ಅಥವಾ ಕಟ್ಟಡ ಕಟ್ಟಲು ಬಳಕೆ ಮಾಡುತ್ತಿರುವುದನ್ನು ಖಂಡಿಸಿದರು.
ಕಾವೇರಿ ನದಿಯ ದಡ ಹಾಗೂ ಸೇತುವೆ ಆಸುಪಾಸಿನಲ್ಲಿ ಇಟಾಚಿ ನದಿ ಮಣ್ಣು ತೆಗೆದು ಒತ್ತುವರಿ ಮಾಡಿಕೊಂಡು ರಾಜಾರೋಷವಾಗಿ ಕಾವೇರಿ ನದಿ ಮುಚ್ಚುತ್ತಿದ್ದರೂ ತಹಸೀಲ್ದಾರ್ ಅವರಾಗಲೀ, ಸಂಬಂಧಪಟ್ಟ ಆರ್‌ಐ, ವಿ.ಐ.ಗಳಾಗಲಿ ಯಾವುದೇ ಕ್ರಮ ಜರುಗಿಸದೇ ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ದಿನನಿತ್ಯ ಅಧಿಕಾರಿಗಳು ಹೆದ್ದಾರಿ ಸೇತುವೆ ಪಕ್ಕದಲ್ಲೇ ಓಡಾಡುತ್ತಾರೆ. ನದಿಯಿಂದ ಮಣ್ಣು ಬಗೆದು ನದಿ ಮುಚ್ಚಿ ಒತ್ತುವರಿ ಮಾಡಿಕೊಂಡಿರುವುದು ಎದ್ದು ಕಾಣುತ್ತಿದೆ. ಈ ವಿಷಯಗಳು ಅಧಿಕಾರಿಗಳ ಗಮನಕ್ಕೆ ಬಂದರೂ ಚಕಾರ ಎತ್ತುತ್ತಿಲ್ಲ ಏಕೆ. ಇದಕ್ಕೂ ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಬ್ಬ ಸಾಮಾನ್ಯ ರೈತ ಆಕಸ್ಮಿಕವಾಗಿ ಕಾನೂನು ಅರಿವಿಲ್ಲದೆ ನದಿಯೊಳಗೆ 10 ಬಾಡ್ಲಿ ಮರಳು ಎತ್ತಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಉದಾಹರಣೆಗಳಿವೆ. ನದಿ ದಿಕ್ಕನ್ನೇ ಬದಲಾಯಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳದೇ ನನಗೂ ಅದಕ್ಕೂ ಸಂಬಂಧವಿಲ್ಲ ಎಂಬ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಬಲಾಢ್ಯರು ಇಟಾಚಿಯನ್ನೇ ಬಳಸಿ ಕಾವೇರಿ ನದಿಯನ್ನೇ ಗುಂಡಿಗಳನ್ನಾಗಿ ಮಾಡಿ ಒತ್ತುವರಿ ಮಾಡಿಕೊಂಡಿದ್ದರೂ ಕಾನೂನು ಕ್ರಮಕೈಗೊಳ್ಳದೇ ಉದಾಸೀನ, ಜಾಣ ಮೌನಕ್ಕೆ ಶರಣಾಗಿರುವ ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಡೀಸಿ ಡಾ.ಕುಮಾರ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾವೇರಿ ನದಿ ಸಂರಕ್ಷಣೆ ಜನಸಾಮಾನ್ಯರು, ಅಧಿಕಾರಿಗಳ ಕರ್ತವ್ಯ. ತಮ್ಮ ಸ್ವಾರ್ಥ ಸಾಧನೆಗಾಗಿ ನದಿಯನ್ನು ಮುಚ್ಚಿ ಒತ್ತುವರಿ ಮಾಡಿಕೊಂಡಿರುವ ದುರಾಳರು ಕಾನೂನು ಭಯವಿಲ್ಲದೆ ಎಲ್ಲವೂ ನಮ್ಮ ಕಪಿಮುಷ್ಠಿಯಲ್ಲಿದೆ ಎಂಬ ಸರ್ವಾಧಿಕಾರಿ ಧೋರಣೆಯಿಂದ ಹೀನ ಕೃತ್ಯಕ್ಕೆ ಕೈಹಾಕಿ, ಸಮಾಜ, ಪರಿಸರ, ನದಿ ಮೂಲ ನಾಶ ಮಾಡುತ್ತಿದ್ದಾರೆ. ಅಧಿಕಾರಿಗಳು ಬಲಾಢ್ಯರಿಗೆ ಬೆಂಬಲವಾಗಿ ನಿಂತುಕೊಂಡು ಅವರಿಗೇ ಕುಮ್ಮಕ್ಕು ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.ತಮ್ಮ ಸ್ವಾರ್ಥ ಸಾಧನೆಗಾಗಿ ಕಾವೇರಿ ನದಿಯನ್ನೇ ಒತ್ತುವರಿ ಮಾಡಿಕೊಂಡು ದಿಕ್ಕನ್ನೇ ತಪ್ಪಿಸಿರುವವರ ವ್ಯಕ್ತಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ಎಷ್ಟು ಬಫರ್ ಜೋನ್‌ಗಳಿವೆ ಎಂಬುದರ ಬಗ್ಗೆ ಸಮಗ್ರ ತನಿಖೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಕಾನೂನು ಹೋರಾಟ ರೂಪಿಸಲಾಗುವುದು ಎಂದು ಪಾಪು ಎಚ್ಚರಿಸಿದ್ದಾರೆ.