ಸರ್ಕಾರಿ ಸ್ಮಶಾನ ಜಾಗ ಒತ್ತುವರಿ: ಮೃತ ವ್ಯಕ್ತಿ ಅಂತ್ಯಸಂಸ್ಕಾರಕ್ಕೆ ಒತ್ತುವರಿದಾರನಿಂದ ಅಡ್ಡಿ..!

| Published : Mar 27 2024, 01:05 AM IST

ಸರ್ಕಾರಿ ಸ್ಮಶಾನ ಜಾಗ ಒತ್ತುವರಿ: ಮೃತ ವ್ಯಕ್ತಿ ಅಂತ್ಯಸಂಸ್ಕಾರಕ್ಕೆ ಒತ್ತುವರಿದಾರನಿಂದ ಅಡ್ಡಿ..!
Share this Article
  • FB
  • TW
  • Linkdin
  • Email

ಸಾರಾಂಶ

ಒತ್ತುವರಿದಾರರು ಅಧಿಕಾರಿಗಳ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡು ಗಲಾಟೆ ಮಾಡುತ್ತಿರುವುದು ಸರಿಯಲ್ಲ. ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಲಿದೆ ಎಂದು ಎಚ್ಚರಿಕೆ. ಅಂತಿಮವಾಗಿ ಪೊಲೀಸರ ರಕ್ಷಣೆಯಲ್ಲಿ ಮೃತ ಮಂಜುನಾಥ್‌ ದೇಹವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸರ್ಕಾರಿ ಸ್ಮಶಾನ ಜಾಗದಲ್ಲಿ ಶವ ಸಂಸ್ಕಾರ ಮಾಡಲು ಒತ್ತುವರಿದಾರ ಅಡ್ಡಿಪಡಿಸಿದ ವಿಲಕ್ಷಣ ಘಟನೆ ಮಂಗಳವಾರ ಹೋಬಳಿಯ ರಾಮನಹಳ್ಳಿಯಲ್ಲಿ ಜರುಗಿದೆ.

ಗ್ರಾಮದ ಮಂಜುನಾಥ್ (65) ಅನಾರೋಗ್ಯದಿಂದ ನಿಧನರಾಗಿದ್ದರು. ಈ ಕುಟುಂಬದವರಿಗೆ ಯಾವುದೇ ಜಮೀನು ಇಲ್ಲ. ಕಳೆದ 20 ವರ್ಷಗಳಿಂದ ಗ್ರಾಮದಲ್ಲಿ ನೆಲೆಸಿ ಕೂಲಿ ಮಾಡಿಕೊಂಡಿದ್ದರು. ಶವ ಸಂಸ್ಕಾರಕ್ಕೂ ಜಾಗವಿರಲಿಲ್ಲ.

ಗ್ರಾಮದ ಎರಡು ಎಕರೆ ಸರ್ಕಾರಿ ಸ್ಮಶಾನ ಜಾಗವಿರುವುದನ್ನು ಗ್ರಾಮ ಮುಖಂಡರು, ಹಿರಿಯರು ತಿಳಿಸಿದರು. ಅದರಂತೆ ಮೃತರ ಕುಟುಂಬದವರು ಗ್ರಾಮಸ್ಥರ ಸಹಕಾರದೊಂದಿಗೆ ಮೃತ ಮಂಜುನಾಥ್‌ ದೇಹವನ್ನು ಸರ್ಕಾರಿ ಜಾಗಕ್ಕೆ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ.

ಈ ವೇಳೆ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿದ್ದ ವ್ಯಕ್ತಿ (ಅಯ್ಯನಕೊಪ್ಪಲು ಕುಮಾರ್‌ ಕುಟುಂಬ) ತಮ್ಮ ಜಾಗದಲ್ಲಿ ಅಂತ್ಯಕ್ರಿಯೆ ಮಾಡದಂತೆ ತೀವ್ರ ಗಲಾಟೆ ಮಾಡಲು ಆರಂಭಿಸಿದರು. ಈ ಜಾಗ ನಮ್ಮದು. ಶವ ಊಳಲು ಬಿಡುವುದಿಲ್ಲ. ತೆಂಗು, ಕಬ್ಬು ಬೆಳೆದಿರುವುದು ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡು ಒತ್ತುವರಿದಾರರು ಗಲಾಟೆ ಮಾಡಬಹುದು ಎಂದು ಮುಂಜಾಗ್ರತೆಯಾಗಿ ಕಿಕ್ಕೇರಿಯ ನಾಡಕಚೇರಿ ಅಧಿಕಾರಿಗಳಿಗೆ, ಕಿಕ್ಕೇರಿ ಪೊಲೀಸರಿಗೆ ತಿಳಿಸಿದ್ದರು.

ಸ್ಥಳದಲ್ಲೇ ಇದ್ದ ಕಂದಾಯ ಇಲಾಖೆಯವರು ಸ್ಮಶಾನ ಜಾಗ ಸರ್ವೇ ಮಾಡಿದಾಗ ಒತ್ತುವರಿಯಾಗಿರುವುದು ಕಂಡು ಬಂದಿದೆ. ಮೃತರ ಅಂತ್ಯಕ್ರಿಯೆಗೆ ತೊಂದರೆ ನೀಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಗೆ ನೀಡಿದ್ದಾರೆ.

ಈ ವೇಳೆ ಒತ್ತುವರಿದಾರರು ಅಧಿಕಾರಿಗಳ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡು ಗಲಾಟೆ ಮಾಡುತ್ತಿರುವುದು ಸರಿಯಲ್ಲ. ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಲಿದೆ ಎಂದು ಎಚ್ಚರಿಸಿದರು.

ಅಂತಿಮವಾಗಿ ಪೊಲೀಸರ ರಕ್ಷಣೆಯಲ್ಲಿ ಮೃತ ಮಂಜುನಾಥ್‌ ದೇಹವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಆಡಳಿತಾಧಿಕಾರಿ ಸುನಿಲ್ ಗಾಣಿಗೇರ, ಕಿಕ್ಕೇರಿ ಪೊಲೀಸರು ಹಾಜರಿದ್ದರು.ಒತ್ತುವರಿ ತೆರವಿಗೆ ಒತ್ತಾಯ

ಗ್ರಾಮದ ಸರ್ವೇ ನಂ.30ರಲ್ಲಿರುವ ಸುಮಾರು 2 ಎಕರೆ ಸರ್ಕಾರಿ ಸ್ಮಶಾನ ಜಾಗವನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಹಲವರಿಗೆ ಜಮೀನು ಇಲ್ಲ. ಅಂತ್ಯಕ್ರಿಯೆ ಮಾಡಲು ಪರದಾಡಬೇಕಿದೆ. ಅಧಿಕಾರಿಗಳು ಕೂಡಲೇ ಸ್ಮಶಾನ ಜಾಗ ಒತ್ತುವರಿ ಮಾಡಿಸಬೇಕು. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.