ರುದ್ರಭೂಮಿಗೆ ಮೀಸಲಿಟ್ಟ ಭೂಮಿಯನ್ನು ಸೇರಿದಂತೆ ಸರ್ಕಾರಿ ಜಾಗ 10 ಎಕರೆಯನ್ನು ಒತ್ತುವರಿ ಮಾಡಿಕೊಂಡು ರಾತ್ರೋರಾತ್ರಿ ಸಮತಟ್ಟು ಮಾಡಿದನ್ನು ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿದರು. ಹಳೆಬೀಡು ಹೋಬಳಿ ಪನ್ನತ್ ಪುರ, ದೇವಿಹಳ್ಳಿ , ಭೋವಿ ಕಾಲೋನಿ, ಮುಳ್ಳೇನಹಳ್ಳಿ, ಬ್ಯಾಡರಹಳ್ಳಿ ಸೇರಿದಂತೆ ಸುಮಾರು 10 ಗ್ರಾಮಗಳಿಗೆ ಸ್ಮಶಾನ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಕ್ಕಾಗಿ ಸರ್ವೆ ನಂಬರ್ 53 ಹಾಗೂ 54ರಲ್ಲಿ ಜಾಗವನ್ನು ಮೀಸಲಿಡಲಾಗಿತ್ತು. ಆದರೆ ಇದೇ ಗ್ರಾಮದ ಹನುಮಂತ ಭೋವಿ, ಶಿವು ಭೋವಿ ಹಾಗೂ ಪುಟ್ಟ ಭೋವಿ ಎಂಬ ಒಂದೇ ಕುಟುಂಬಸ್ಥರು ಅಕ್ರಮ ದಾಖಲೆ ಸೃಷ್ಟಿಸಿಕೊಂಡು ಭೂ ಕಬಳಿಕೆ ಮಾಡಿದ್ದಾರೆ ಎಂದು ಗ್ರಾಮಸ್ಥರು ನಮಗೆ ನ್ಯಾಯ ಸಿಗುವರೆಗೂ ಸ್ಥಳ ಬಿಟ್ಟು ತೆರಳುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ರುದ್ರಭೂಮಿಗೆ ಮೀಸಲಿಟ್ಟ ಭೂಮಿಯನ್ನು ಸೇರಿದಂತೆ ಸರ್ಕಾರಿ ಜಾಗ 10 ಎಕರೆಯನ್ನು ಒತ್ತುವರಿ ಮಾಡಿಕೊಂಡು ರಾತ್ರೋರಾತ್ರಿ ಸಮತಟ್ಟು ಮಾಡಿದನ್ನು ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿದರು.

ತಾಲೂಕಿನ ಹಳೆಬೀಡು ಹೋಬಳಿ ಪನ್ನತ್ ಪುರ, ದೇವಿಹಳ್ಳಿ , ಭೋವಿ ಕಾಲೋನಿ, ಮುಳ್ಳೇನಹಳ್ಳಿ, ಬ್ಯಾಡರಹಳ್ಳಿ ಸೇರಿದಂತೆ ಸುಮಾರು 10 ಗ್ರಾಮಗಳಿಗೆ ಸ್ಮಶಾನ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಕ್ಕಾಗಿ ಸರ್ವೆ ನಂಬರ್ 53 ಹಾಗೂ 54ರಲ್ಲಿ ಜಾಗವನ್ನು ಮೀಸಲಿಡಲಾಗಿತ್ತು. ಆದರೆ ಇದೇ ಗ್ರಾಮದ ಹನುಮಂತ ಭೋವಿ, ಶಿವು ಭೋವಿ ಹಾಗೂ ಪುಟ್ಟ ಭೋವಿ ಎಂಬ ಒಂದೇ ಕುಟುಂಬಸ್ಥರು ಅಕ್ರಮ ದಾಖಲೆ ಸೃಷ್ಟಿಸಿಕೊಂಡು ಭೂ ಕಬಳಿಕೆ ಮಾಡಿದ್ದಾರೆ ಎಂದು ಗ್ರಾಮಸ್ಥರು ನಮಗೆ ನ್ಯಾಯ ಸಿಗುವರೆಗೂ ಸ್ಥಳ ಬಿಟ್ಟು ತೆರಳುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರಾದ ಮಲ್ಲಿಕಾರ್ಜುನ, ಸುರೇಶ್, ಅಣ್ಣಪ್ಪ ಮಾತನಾಡಿ ದೇವಿಹಳ್ಳಿ ಗ್ರಾಮದ ಸರ್ವೆ ನಂಬರ್‌ 53 ಹಾಗೂ ಪನ್ನತ್‌ಪುರ ಗ್ರಾಮದ ಸರ್ವೆ ನಂ. 54ರಲ್ಲಿ ಸರ್ಕಾರಿ ಭೂಮಿ 32 ಎಕರೆ ಇದ್ದು ಅಲ್ಲಿ ಸುಮಾರು 8 ಜನರಿಗೆ ಒಂದೂವರೆ ಎಕರೆಯಂತೆ ಸರ್ಕಾರಿ ಭೂಮಿ ಮಂಜೂರಾಗಿದ್ದು, ಉಳಿದ ಭೂಮಿ ಗ್ರಾಮಠಾಣಾ ಎಂದು ಬರುತ್ತಿದೆ. ಈಗಾಗಲೇ ದೇವಿಹಳ್ಳಿ ಭೋವಿ ಕಾಲೋನಿ ಪನ್ನತ್‌ಪುರ, ಮೂಳೇನಹಳ್ಳಿ, ಬ್ಯಾಡರಹಳ್ಳಿ ಗ್ರಾಮಸ್ಥರಿಗೆ ಸುಮಾರು 400ಕ್ಕೂ ಹೆಚ್ಚು ಕುಟುಂಬ ಇರುವ ವಿವಿಧ ಪಂಗಡದವರಿಗೆ ಇಲ್ಲಿ ರುದ್ರಭೂಮಿಗೆ ಜಾಗ ಮೀಸಲಿಡುವಂತೆ ಮನವಿ ಮಾಡಲಾಗಿದೆ‌. ಇದರ ಜೊತೆಯಲ್ಲಿ ಪೊನ್ನತ್‌ಪುರ ಗ್ರಾಮದ ಪೂರ್ವಿಕರು ಬಳದಗುಂಡಿಯಲ್ಲಿ ಅವರ ಜನಾಂಗದ ಶವ ಸಂಸ್ಕಾರಕ್ಕೆ ಅಲ್ಲಿ ಜಾಗವನ್ನು ಮೀಸಲಿಟ್ಟುಕೊಂಡಿದ್ದೇವೆ ಎಂದರು.

ಆದರೆ ಇದೇ ಗ್ರಾಮದ ಶಿವಭೋವಿ, ಹನುಮಂತಭೋವಿ, ಪುಟ್ಟಭೋವಿ ಕುಟುಂಬಸ್ಥರು ಅವರಿಗೆ ಸರ್ಕಾರ ಮಂಜೂರು ಮಾಡಿರುವ ಭೂಮಿಗಿಂತಲೂ ಹೆಚ್ಚುವರಿಯಾಗಿ ಭೂಮಿ ಒತ್ತುವರಿ ಮಾಡಿಕೊಂಡಿರುವುದಲ್ಲದೆ ರಾತ್ರೋರಾತ್ರಿ ಜೆಸಿಬಿಗಳಿಂದ ಇಲ್ಲಿದ್ದ ರುದ್ರಭೂಮಿಯೇ ಇಲ್ಲದಂತೆ ಮುಚ್ಚಿಹಾಕಿದ್ದಾರೆ. ಇಲ್ಲಿಯ ಗ್ರಾಮಲೆಕ್ಕಾಧಿಕಾರಿ ಗಣೇಶ್ ಎಂಬುವವರು ಅವರ ಜೊತೆ ಶಾಮೀಲಾಗಿದ್ದು ನಮಗೆ ನ್ಯಾಯ ಸಿಗಬೇಕು. ಈ ಗ್ರಾಮಗಳಿಗೆ ಯಾವುದೇ ರುದ್ರಭೂಮಿ ಇಲ್ಲದ ಕಾರಣ. ರುದ್ರಭೂಮಿಗೆ ಸ್ಥಳಾವಕಾಶ ಮಾಡಿಕೊಡುವುದರ ಜೊತೆಗೆ ಜಮೀನು ಇರದವರಿಗೆ ಜಮೀನು ಮಂಜೂರು ಮಾಡಿಕೊಡಬೇಕು. ಇಲ್ಲಿಗೆ ಅಧಿಕಾರಿಗಳು ಬಂದು ನಮಗೆ ನ್ಯಾಯ ದೊರಕಿಸಿಕೊಡುವವರೆಗೂ ನಾವು ಜಾಗ ಖಾಲಿಮಾಡುವುದಿಲ್ಲ ಎಂದು ಅನಿರ್ದಿಷ್ಟ ಅವಧಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ತಹಸೀಲ್ದಾರ್‌ ಶ್ರೀಧರ್‌ ಕಂಕನವಾಡಿ ಈ ಭಾಗದ ಸಮಸ್ಯೆ ಅರಿಯಲು ನಾನೇ ಬಂದಿದ್ದೇನೆ. ಪ್ರತಿಭಟನೆ ಒಂದೇ ಪರಿಹಾರವಲ್ಲ. ಏನೇ ಇದ್ದರೂ ನಿಮ್ಮ ಸಮಸ್ಯೆಗೆ ನನ್ನ ಬಳಿ ಬಂದು ಮಾಹಿತಿ ನೀಡಿ. ಅಧಿಕಾರಿಗಳ ಜೊತೆ ಇಲ್ಲಿ ಯಾರಿಗೆ ಭೂಮಿ ಮಂಜೂರಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕು. ಈ ಸರ್ವೆ ನಂಬರಲ್ಲಿ ಎಷ್ಟು ಜಾಗ ಒತ್ತುವರಿಯಾಗಿದೆ ಎಂದು ಸರ್ವೆ ಅಧಿಕಾರಿಗಳಿಗೆ ಸರ್ವೆ ಮಾಡಲು ಸೂಚಿಸಿ ಅಷ್ಟು ಮಾಹಿತಿಯನ್ನು ನನಗೆ ನೀಡುವಂತೆ ತಿಳಿಸಿದರಲ್ಲದೆ, ಇಲ್ಲಿ ಯಾರೇ ಒತ್ತುವರಿ ಮಾಡಿದ್ದರು ಅದನ್ನು ಬಿಡುವುದಿಲ್ಲ. ರುದ್ರಭೂಮಿಗೆ ಮೀಸಲಿಟ್ಟ ಜಾಗವನ್ನು ಯಾರೂ ಸಹ ಕಬಳಿಸುವಂತಿಲ್ಲ. ನಿಮಗೆ ನೀಡಿರುವ ಸಾಗುವಳಿಯಲ್ಲಿ ಎಷ್ಟು ಜಮೀನು ಮಂಜೂರಾಗಿರುತ್ತದೆ ಅಷ್ಟಕ್ಕೆ ಮಾತ್ರ ಅವರಿಗೆ ಅವಕಾಶ ಇರುತ್ತದೆ ಎಂದರು. ಅದು ಬಿಟ್ಟು ಹೆಚ್ಚುವರಿ ಒತ್ತುವರಿ ಮಾಡಿದ್ದರೆ ಅದನ್ನು ಹಿಂಪಡೆಯುವ ಅಧಿಕಾರ ನಮಗಿದೆ.

ಇಲ್ಲಿ ಯಾವುದೇ ಗಲಾಟೆಗೆ ಅವಕಾಶ ನೀಡದೆ ಸೌಜನ್ಯದಿಂದ ವರ್ತಿಸಿ ಎಂದು ಗ್ರಾಮಸ್ಥರಿಗೆ ತಿಳಿಸಿ ಪ್ರತಿಭಟನೆ ಹಿಂಪಡೆಯುವಂತೆ ತಿಳಿಸಿದರು. ಜತೆಗೆ ಅತಿ ಶೀಘ್ರದಲ್ಲಿ ಈ ಗ್ರಾಮವನ್ನು ಕಂದಾಯ ಗ್ರಾಮ ಹಾಗು ಪೌತಿ ಖಾತೆ ಮುಕ್ತ ಗ್ರಾಮವನ್ನಾಗಿ ಮಾಡಲಾಗುವುದು. ಇದರಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ನೇರವಾಗಿ ಕಚೇರಿಗೆ ಬಂದು ನಮಗೆ ದಾಖಲಾತಿ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಯಲಹಂಕ ಗ್ರಾಪಂ ಸದಸ್ಯ ಕೃಷ್ಣ, ವೆಂಕಟಭೋವಿ, ಚೌಡಭೋವಿ, ಪರಮೇಶ್, ವೆಂಕಟೇಶ್, ಧರ್ಮಭೋವಿ, ವೆಂಕಟಮ್ಮ, ಸಂಕಮ್ಮ, ಪೆದ್ದಮ್ಮ, ನಂಜಮ್ಮ, ಪಾರ್ವತಿ ಸೇರಿದಂತೆ ಇತರರು ಹಾಜರಿದ್ದರು.