ಹೊಳೆನರಸೀಪುರದಲ್ಲಿ ಜಮೀನಿನ ಸಂಪರ್ಕ ರಸ್ತೆ ಒತ್ತುವರಿ: ರೈತ ಕಂಗಾಲು

| Published : Jun 13 2024, 12:51 AM IST

ಹೊಳೆನರಸೀಪುರದಲ್ಲಿ ಜಮೀನಿನ ಸಂಪರ್ಕ ರಸ್ತೆ ಒತ್ತುವರಿ: ರೈತ ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ತಾಲೂಕಿನ ಮೂಡಲಕೊಪ್ಪಲು ಗ್ರಾಮದ ಸಮೀಪ ಜಮೀನಿಗೆ ತೆರಳಲು ಇದ್ದ ರಸ್ತೆಯನ್ನು ಒತ್ತುವರಿ ಮಾಡಿಕೊಂಡು, ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಮಹದೇವ ಎಂಬ ರೈತ ಕಣ್ಣೀರು ಹಾಕಿದರು.

ಮೂಡಲಕೊಪ್ಪಲು ಗ್ರಾಮದಲ್ಲಿನ ಹೊಲಕ್ಕೆ ತೆರಳುವ ದಾರಿ ಮುಟ್ಟುಗೋಲು । ವಿನಾಕಾರಣ ತೊಂದರೆ ಆರೋಪ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಮೂಡಲಕೊಪ್ಪಲು ಗ್ರಾಮದ ಸಮೀಪ ಜಮೀನಿಗೆ ತೆರಳಲು ಇದ್ದ ರಸ್ತೆಯನ್ನು ಒತ್ತುವರಿ ಮಾಡಿಕೊಂಡು, ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಮಹದೇವ ಎಂಬ ರೈತ ಕಣ್ಣೀರು ಹಾಕಿದರು.

ತಾಲೂಕಿನ ಮೂಡಲಕೊಪ್ಪಲು ಗ್ರಾಮದಲ್ಲಿ ಅಳಲನ್ನು ತೋಡಿಕೊಂಡ ರೈತ, ‘ನಮ್ಮ ಜಮೀನಿಗೆ ತೆರಳಲು ೫೦ಕ್ಕೂ ಹೆಚ್ಚು ವರ್ಷಗಳಿಂದ ನಮ್ಮ ಪೂರ್ವಿಕರು ಬಳಸುತ್ತಿದ್ದ ಸರ್ಕಾರಿ ಭೂಮಿಯಲ್ಲಿ ಇದ್ದ ರಸ್ತೆಯನ್ನು ಉಳುಮೆ ಮಾಡಿಕೊಂಡು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಈ ಸಮಸ್ಯೆ ಕುರಿತಂತೆ ೨೦೨೧ ಹಾಗೂ ೨೦೨೨ ರಲ್ಲಿ ತಹಸೀಲ್ದಾರ್ ಅವರಿಗೂ ಮನವಿ ಸಲ್ಲಿಸಿದ್ದೇವೆ. ಜಿಪಿಆರ್‌ಎಸ್‌ನಲ್ಲಿ ನಕ್ಷೆ ನೋಡಿದರೂ ರಸ್ತೆ ಎಂದೇ ತೋರಿಸುತ್ತದೆ. ಈ ರಸ್ತೆಯಲ್ಲಿ ಮುಂದೆ ಸಾಗಿದರೇ ೯೦ ಎಕರೆಗೂ ಹೆಚ್ಚು ಕೃಷಿ ಭೂಮಿಗೆ ಉಪಯೋಗವಿದೆ. ಇನ್ನೊಂದು ಭಾಗದಲ್ಲಿ ಕೆರೆ ಇದ್ದು, ಈ ರಸ್ತೆ ಅನಿವಾರ್ಯವಾಗಿದೆ. ರಸ್ತೆ ಇಲ್ಲದೇ ಕೃಷಿ ಭೂಮಿಯಲ್ಲಿ ವ್ಯವಸಾಯವನ್ನೇ ಮಾಡಲಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇವರ ವರ್ತನೆಯಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ನಮ್ಮ ಬದುಕು ಶೋಚನೀಯವಾಗಿದೆ. ನಮ್ಮ ಸ್ವಂತ ಜಮೀನಿನಲ್ಲಿ ಓಡಾಡಲು ನಾವು ಭೂಮಿ ಬಿಟ್ಟು ಕೊಟ್ಟು ರಸ್ತೆ ಮಾಡಿಕೊಳ್ಳಲು ಸಿದ್ದರಿದ್ದೇವೆ, ಆದರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿ ರಸ್ತೆಗೆ ಭೂಮಿ ನೀಡಲು ಸಿದ್ದರಿಲ್ಲ. ಕಾಳೇಗೌಡರ ಜತೆಗೆ ಚೇತನ್, ಪ್ರವೀಣ್, ಜವರೇಗೌಡ, ರಮೇಶ ಹಾಗೂ ವಾಟರ್‌ಮನ್ ನಿಂಗೇಗೌಡ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾವೇರಮ್ಮ ಎಂಬ ರೈತ ಮಹಿಳೆ ಮಾತನಾಡಿ, ‘ನನ್ನ ಜಮೀನಿನಲ್ಲಿ ಸಣ್ಣ ಗುಡಿಸಿಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದು, ಕುಡಿಯಲು ನೀರಿನ ಪೈಪ್‌ಲೈನ್ ಮತ್ತು ವಿದ್ಯುತ್ ಸಂಪರ್ಕ ಕೊಡದಂತೆ ತೊಂದರೆ ನೀಡುತ್ತಿದ್ದಾರೆ. ನಮ್ಮ ತಂದೆ ಇದೇ ರಸ್ತೆಯಲ್ಲಿ ಓಡಾಡಿಕೊಂಡು ವ್ಯವಸಾಯ ಮಾಡುತ್ತಿದ್ದರು. ಈಗ ನನಗೆ ಯಾರು ದಿಕ್ಕು ಇಲ್ಲ, ನಾಲ್ಕು ಹೆಣ್ಣುಮಕ್ಕಳ ಜತೆ ಜೀವನ ಮಾಡುತ್ತಿದ್ದೇವೆ, ಇವರು ರಾತ್ರಿ ಹಗಲು ಎನ್ನದೇ ನೀಡುತ್ತಿರುವ ತೊಂದರೆ ಸಹಿಸಲು ಆಗುತ್ತಿಲ್ಲ’ ಎಂದು ರೋದಿಸಿದರು.

ಈ ವೇಳೆ ಲಕ್ಷ್ಮಣ, ಸಾಕರಾಜು, ಲಕ್ಕೇಗೌಡರು, ಕರೀಗೌಡರು, ರಂಗ, ಸಣ್ಣೇಗೌಡ, ಕೃಷ್ಣೇಗೌಡ, ಮಧು, ನಿಂಗರಾಜು, ಮರೀಗೌಡರು, ಜಯಮ್ಮ, ಸವಿತಾ, ಗೋವಿಂದರಾಜು, ಸತೀಶಗೌಡ, ಶಿವಣ್ಣ, ಇತರರು ಇದ್ದರು.