ಮೋದಿ ಸರ್ವಾಧಿಕಾರಿ ಆಡಳಿತ ಕೊನೆಗಾಣಿಸಿ: ಕಿಮ್ಮನೆ ರತ್ನಾಕರ್

| Published : Mar 23 2024, 01:09 AM IST

ಮೋದಿ ಸರ್ವಾಧಿಕಾರಿ ಆಡಳಿತ ಕೊನೆಗಾಣಿಸಿ: ಕಿಮ್ಮನೆ ರತ್ನಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ಕೈಗೊಂಬೆಯಂತೆ ವರ್ತಿಸುತ್ತಿರುವ ಚುನಾವಣಾ ಆಯೋಗ ಕೂಡ ನರೇಂದ್ರ ಮೋದಿಯವರಿಗೆ ಚುನಾವಣೆ ಪ್ರಚಾರಕ್ಕೆ ಅನುಕೂಲವಾಗುವಂತೆ ಏಳು ಹಂತದ ಚುನಾವಣಾ ದಿನಾಂಕ ನಿಗದಿಪಡಿಸಿದೆ. ಜನರ ನಡುವಿನ ಮಧುರ ಬಾಂಧವ್ಯ ಕೆಡಿಸಿ ಬದುಕಿನ ವ್ಯವಸ್ಥೆಯನ್ನೇ ಬಿಜೆಪಿ ಹಾಳುಗೆಡುವುತ್ತಿದೆ. ಈ ಎಲ್ಲಾ ದುರಂತ ಸಂಗತಿಗಳ ಎತ್ತಿ ಹಿಡಿಯಬೇಕಾದ ಮಾಧ್ಯಮಗಳು ಬಂಡವಾಳಶಾಹಿಗಳ ಕೈಗೊಂಬೆಗಳಾಗಿರೋದು ದುರಂತ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆಯಿಂದ ಪ್ರತಿಪಕ್ಷಗಳ ಧ್ವನಿಯನ್ನೇ ಅಡಗಿಸುವಂತೆ ಹಿಟ್ಲರ್ ಮಾದರಿ ಆಡಳಿತ ನಡೆಸುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಕೊನೆಗಾಣಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಕೊನೆಗಾಣಿಸದಿದ್ದಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಕೊನೆಯ ಚುನಾವಣೆಯಾಗುವುದು ಖಚಿತ. ಪ್ರಧಾನಿ ಕೈಗೊಂಬೆಯಂತೆ ವರ್ತಿಸುತ್ತಿರುವ ಚುನಾವಣಾ ಆಯೋಗ ಕೂಡ ನರೇಂದ್ರ ಮೋದಿಯವರಿಗೆ ಚುನಾವಣೆ ಪ್ರಚಾರಕ್ಕೆ ಅನುಕೂಲವಾಗುವಂತೆ ಏಳು ಹಂತದ ಚುನಾವಣಾ ದಿನಾಂಕ ನಿಗದಿಪಡಿಸಿದೆ. ಜನರ ನಡುವಿನ ಮಧುರ ಬಾಂಧವ್ಯ ಕೆಡಿಸಿ ಬದುಕಿನ ವ್ಯವಸ್ಥೆಯನ್ನೇ ಬಿಜೆಪಿ ಹಾಳುಗೆಡುವುತ್ತಿದೆ. ಈ ಎಲ್ಲಾ ದುರಂತ ಸಂಗತಿಗಳ ಎತ್ತಿ ಹಿಡಿಯಬೇಕಾದ ಮಾಧ್ಯಮಗಳು ಬಂಡವಾಳಶಾಹಿಗಳ ಕೈಗೊಂಬೆಗಳಾಗಿರೋದು ದುರಂತ ಎಂದೂ ಹೇಳಿದರು.

ರೈತರು, ಶ್ರೀಸಾಮಾನ್ಯರ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಪುತ್ರಿ ಮಾತ್ರವಲ್ಲದೇ ಕನ್ನಡ ನೆಲ ಜಲ ಹಾಗೂ ಭಾಷೆಯ ಗೌರವ ಎತ್ತಿ ಹಿಡಿದಿದ್ದ ಡಾ.ರಾಜಕುಮಾರ್ ಕುಟುಂಬದ ಸೊಸೆ ಗೀತಾ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಎಸ್.ಬಂಗಾರಪ್ಪನವರ ಸಾಧನೆಗೆ ಕೃತಜ್ಞತೆ ರೂಪದಲ್ಲಿ ಜನರು ಗೀತಾರಿಗೆ ಬೆಂಬಲ ನೀಡಲಿದ್ದು ಈ ಚುನಾವಣೆಯಲ್ಲಿ ಖಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಬಡವರಿಗೆ ನೀಡುವ ಗ್ಯಾರಂಟಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಅಂಬಾನಿ ಕುಟುಂಬದ ಸಾಲಮನ್ನಾ ಮಾಡಿದೆ. ದೇಶದ ಬೊಕ್ಕಸಕ್ಕೆ ವಂಚಿಸಿರುವ 27 ಮಂದಿ ಗುಜರಾತಿನಿಂದ ಪರಾರಿಯಾಗಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ಸಾವಿರಾರು ಕೋಟಿ ದೇಣಿಗೆ ಸಂಗ್ರಹಿಸಿರುವ ಬಿಜೆಪಿ ₹210 ಕೋಟಿ ದಂಡ ವಿಧಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಅತಿವೃಷ್ಟಿ, ಅನಾವೃಷ್ಟಿಗೂ ಅನುದಾನ ನೀಡುತ್ತಿಲ್ಲಾ ಎಂದೂ ಟೀಕಿಸಿದರು.

ಈಶ್ವರಪ್ಪ ಸ್ಪರ್ಧೆ ಒಳ್ಳೆಯ ಅಂಶ:

ಬಿ.ವೈ.ರಾಘವೇಂದ್ರ ಮತ್ತು ಕೆ.ಎಸ್.ಈಶ್ವರಪ್ಪ ಇಬ್ಬರೂ ಕೆಟ್ಟ ಪಕ್ಷದ ಸದಸ್ಯರೇ ಆಗಿದ್ದಾರೆ. ಈಶ್ವರಪ್ಪ ಕೊನೆಯವರೆಗೂ ತಮ್ಮ ನಿಲುವಿನಿಂದ ಹಿಂದೆ ಸರಿಲಿಕ್ಕಿಲ್ಲಾ. ಅವರು ಸ್ಪರ್ಧೆ ಮಾಡುವ ತೀರ್ಮಾನ ಒಳ್ಳೆಯ ಅಂಶವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರದಿಂದ ಕೆ.ಕೆ.ಮಂಜುನಾಥ್ ಸ್ಪರ್ಧೆ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿ.ಎಸ್.ನಾರಾಯಣರಾವ್, ಕೆಸ್ತೂರು ಮಂಜುನಾಥ್, ಅಮರನಾಥ ಶೆಟ್ಟಿ, ಡಿ.ಎಸ್.ವಿಶ್ವನಾಥ ಶೆಟ್ಟಿ, ಪಪಂ ಅಧ್ಯಕ್ಷೆ ಗೀತಾ ರಮೇಶ್ ಇದ್ದರು.

-----------

ನಾಳೆ ತೀರ್ಥಹಳ್ಳಿಗೆ ಗೀತಾ ಭೇಟಿ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಮಾ.24ರಂದು ಪಟ್ಟಣಕ್ಕೆ ಆಗಮಿಸಲಿದ್ದು ಪಟ್ಟಣದ ಕೆಟಿಕೆ ಕಲ್ಯಾಣ ಮಂದಿರದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ. ಅವರನ್ನು ಕುಡುಮಲ್ಲಿಗೆಯಿಂದ ಬೈಕ್ ರ್‍ಯಾಲಿಯಲ್ಲಿ ಕರೆತರಲಾಗುವುದು ಎಂದು ಕಿಮ್ಮನೆ ರತ್ನಾಕರ್‌ ತಿಳಿಸಿದರು.

ಬಿಜೆಪಿ ಸಿದ್ಧಾಂತ ಈ ದೇಶಕ್ಕೆ ಹೊಂದಾಣಿಕೆಯಾಗಲ್ಲ. ಮೀಸಲಾತಿ ವಿರೋಧಿಸುವ ಪಕ್ಷ ಸಂವಿಧಾನದ 14ನೇ ಷೆಡ್ಯೂಲನ್ನು ರದ್ದುಗೊಳಿಸಿ ಗೋಲ್ವಾಲ್ಕರ್ ಬರೆದ ಬಂಚ್ ಆಫ್ ಥಾಟ್ ಪುಸ್ತಕದ ಆಶಯ ಜಾರಿಗೆ ತರುವ ಹುನ್ನಾರ ನಡೆಸಿದೆ. ಚಿಂತಕರು ವಿಶೇಷವಾಗಿ ದಲಿತರು ಈ ಕುರಿತು ಚಿಂತನೆ ಮಾಡಬೇಕಿದೆ.

ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ವಕ್ತಾರ