ಕೊಪ್ಪಳ: ಬಲ್ಡೋಟಾ ಸೇರಿದಂತೆ ವಿವಿಧ ಕಾರ್ಖಾನೆ ಸ್ಥಾಪನೆ ಮತ್ತು ವಿಸ್ತರಣೆ ವಿರೋಧಿಸಿ ನಗರದ ನಗರಸಭೆ ಬಳಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರ 121ನೇ ದಿನ ಪೂರೈಸಿತು. ಧರಣಿಯಲ್ಲಿ ಅನೇಕ ಮುಖಂಡರು ವಿಭಿನ್ನ ಹೊಸರೂಪದ ಹೋರಾಟಕ್ಕೆ ಸಲಹೆ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಮಾತನಾಡಿ, ಕೇಂದ್ರ ಎನ್.ಡಿ.ಎ. ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರಗಳು ಒಬ್ಬರ ಮೇಲೊಬ್ಬರು ಹಾಕಿ ಇಷ್ಟು ದೊಡ್ಡ ಸಂಖ್ಯೆಯ ಜನರ ಆರೋಗ್ಯದ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಅತ್ತ ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲ್ ಇನ್ನೂ ಕೊಪ್ಪಳಕ್ಕೆ ಬಂದು ಜನರ ಮನವೊಲಿಸುತ್ತೇನೆ, ಗವಿಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ಮಾಡುತ್ತೇನೆ ಅನ್ನುತ್ತಿರುವುದು ಅತ್ಯಂತ ಖೇದಕರ ಸಂಗತಿ. ಇಲ್ಲಿನ ಬಲ್ಡೋಟಾ ಮೊದಲು ಜಾಗ ಖಾಲಿ ಮಾಡಬೇಕು. ಅಲ್ಲಿಂದ ಉಳಿದ ಅನೇಕ ವಿಷಾನಿಲ ಉಗುಳುವ ಕಾರ್ಖಾನೆಗಳು ಹದ್ದುಬಸ್ತಿಗೆ ಬರಬೇಕು. ಯಾವುದೇ ಕಾರ್ಖಾನೆ ವಿಸ್ತರಣೆ ಆಗಬಾರದು ಎಂದರು.ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಕೊಪ್ಪಳ ಮತ್ತು ಭಾಗ್ಯನಗರಗಳಲ್ಲಿ ಬಲ್ಡೋಟಾ ಕಂಪನಿ ಜನರಿಗೆ ಹಾರುಬೂದಿ, ವಿಷಾನಿಲ, ಹೊಗೆ ಜತೆಗೆ ಮಂಕುಬೂದಿ ಸಹ ಎರಚಲು ಜನರಿಗೆ ಸಣ್ಣ ಕೊಡುಗೆ ನೀಡಿ, ಮರಳು ಮಾಡಲು ಪ್ರಯತ್ನ ಮಾಡುತ್ತಿದೆ. ಅದರ ಭಾಗವಾಗಿ ಸಿಮೆಂಟ್ ಬೆಂಚ್, ಟ್ರೀ ಗಾರ್ಡ್ ಹಾಕುತ್ತಿದೆ. ಗಿಡಕ್ಕೆ ಒಂದು ದಿನ ನೀರು ಹಾಕದಿದ್ದರೂ ತಾವೇ ಗಿಡ ನೆಟ್ಟಿದ್ದೇವೆ ಅನ್ನುವ ಹಾಗೆ ನಡೆದುಕೊಳ್ಳುತ್ತಿದೆ. ಗವಿಶ್ರೀಗಳೇ ಕಾರ್ಖಾನೆ ಓಡಿಸುವ ಪಣ ತೊಟ್ಟಿದ್ದು, ಜನರು ಸ್ವಯಂಪ್ರೇರಣೆಯಿಂದ ತಮ್ಮ ಬಳಿ ಇರುವ ಈ ಸಿಮೆಂಟ್ ಬೆಂಚ್ ಮತ್ತು ಟ್ರೀ ಗಾರ್ಡ್ ವಾಪಸ್ ಕೊಡಿ. ಈಗಾಗಲೆ ವಾಪಸ್ ಕೊಡುವ ಕಾರ್ಯಕ್ರಮ ಆರಂಭ ಮಾಡಿದ್ದು, ಶೀಘ್ರ ಎಲ್ಲವನ್ನೂ ವಾಪಸ್ ಮಾಡಲಾಗುತ್ತದೆ, ಹಾಗೆಯೇ ವಾಪಸ್ ಮಾಡಿದ ಸ್ಥಳದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಅವರ ನಿಧಿಯಿಂದ ಕೊಡಿಸಲಾಗುತ್ತದೆ ಎಂದರು.
ಧರಣಿಯಲ್ಲಿ ಗಾಯಕರಾದ ಸದಾಶಿವ ಪಾಟೀಲ್, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಪ್ರಕಾಶಕಿ ಮಾಲಾ ಡಿ. ಬಡಿಗೇರ, ಸರೋಜಾ ಬಾಕಳೆ, ಎಸ್.ಬಿ. ರಾಜೂರ, ಡಾ. ಬಸವರಾಜ ಪೂಜಾರ, ಮಹಾದೇವಪ್ಪ ಮಾವಿನಮಡು, ರಾಮಲಿಂಗಯ್ಯ, ಸಿ.ಬಿ. ಪಾಟೀಲ್, ಗಂಗಾಧರ್ ಖಾನಾಪುರ, ಜಿ.ಬಿ. ಪಾಟೀಲ್, ಮಂಜುನಾಥ, ಲಲಿತಾ ಮಜ್ಜಿಗಿ, ಸಂತೋಷ ದೇಶಪಾಂಡೆ, ಬಸವರಾಜಪ್ಪ ಶೆಟ್ಟರ್, ಶಂಭುಲಿಂಗಪ್ಪ ಹಾರಗೇರಿ, ಗಂಗಮ್ಮ ಕೊಡೇಕಲ್, ಸಂಜೀವಮ್ಮ ಮುಂಡರಗಿ ಮುಂತಾದವರಿದ್ದರು.