ಸಾರಾಂಶ
ಅಮಿತ್ ಎಸ್. ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರದಲ್ಲಿ ಎಸ್‌ವಿಟಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಬಿ.ಕಾಮ್ ಪರೀಕ್ಷೆಯಲ್ಲಿ 8ನೇ ರ್‍ಯಾಂಕ್ ಪಡೆದ ಶ್ರೀನಿಧಿ ನಾಯಕ್ ಮತ್ತು ಬಜಗೋಳಿ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಎಸ್‌ಎಸ್‌ಎಲ್‌ಸಿಯಲ್ಲಿ 6ನೇ ರ್‍ಯಾಂಕ್ ಪಡೆದ ಅನ್ವಿ ಪಿ. ಜೈನ್ ಅವರಿಗೆ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಮನುಷ್ಯನ ಬದುಕಿನಲ್ಲಿ ಪ್ರಯತ್ನ ಮತ್ತು ಪರಿಶ್ರಮಕ್ಕೆ ಮೊದಲ ಆದ್ಯತೆ. ಮಾಡುವ ಕೆಲಸ ಸಮರ್ಪಕವಾಗಿರಬೇಕು ಮತ್ತು ಸದಾ ಪರಿಶ್ರಮ ನಿರಂತರತೆಯಿಂದ ಕೂಡಿರಬೇಕು. ಅದಾಗಲೇ ಅಪೂರ್ವ ಯಶಸ್ಸು ನಮ್ಮದಾಗುತ್ತದೆ ಎಂದು ಕಾರ್ಕಳ ಪುರಸಭೆಯ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.ಅವರು ಅಮಿತ್ ಎಸ್. ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರದಲ್ಲಿ ಎಸ್‌ವಿಟಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಬಿ.ಕಾಮ್ ಪರೀಕ್ಷೆಯಲ್ಲಿ 8ನೇ ರ್‍ಯಾಂಕ್ ಪಡೆದ ಶ್ರೀನಿಧಿ ನಾಯಕ್ ಮತ್ತು ಬಜಗೋಳಿ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಎಸ್‌ಎಸ್‌ಎಲ್‌ಸಿಯಲ್ಲಿ 6ನೇ ರ್‍ಯಾಂಕ್ ಪಡೆದ ಅನ್ವಿ ಪಿ. ಜೈನ್ ಅವರಿಗೆ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯ ಅತಿಥಿ ಚಾರ್ಟರ್ಡ್ ಅಕೌಂಟೆಂಟ್ ಕಾರ್ಕಳ ಕಮಲಾಕ್ಷ ಕಾಮತ್ ಮಾತನಾಡಿ, ಮನುಷ್ಯನ ಜೀವನ ಅಸ್ಥಿರವಾದದ್ದು. ಹಾಗಾಗಿ ಅವಕಾಶ ಅನುಕೂಲಗಳಿರುವಾಗ ಎಷ್ಟು ಸಾಧ್ಯವೋ ಅಷ್ಟು ದಾನ ಧರ್ಮಗಳ ಮೂಲಕ ಸಮಾಜದಲ್ಲಿ ನೊಂದವರ ಕಷ್ಟ ನಿವಾರಿಸಲು ಸದಾ ಶ್ರಮಿಸುತ್ತಿರಬೇಕು ಎಂದರು.ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು, ಮಂದಿರದ ಪ್ರವರ್ತಕರಾದ ಶ್ರೀನಿವಾಸ ಜಿ.ಕೆ. ಪೈ ಮತ್ತು ನಿರ್ಮಲಾ ಪೈ ಉಪಸ್ಥಿತರಿದ್ದರು.
ಸುಜಾತಾ ಶೆಟ್ಟಿ ಸ್ವಾಗತಿಸಿದರು. ಸುನೀತಾ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಸೌಮ್ಯಾ ಹೆಗ್ಡೆ ವಂದಿಸಿದರು.