ರೈತರು ಮತ್ತು ಕೃಷಿ ವಲಯವನ್ನು ಸರ್ಕಾರಗಳು ದೀರ್ಘಕಾಲದವರೆಗೆ ನಿರ್ಲಕ್ಷಿಸಿವೆ. ಕೃಷಿ ವಲಯವು ಭಾರತದ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಕೋವಿಡ್-೧೯ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಕಾರ್ಖಾನೆಗಳು ಮುಚ್ಚಲ್ಪಟ್ಟಾಗಲೂ ಕೃಷಿ ವಲಯವು ಶೇ.೩.೬ ದರದಲ್ಲಿ ಬೆಳೆಯುತ್ತಿತ್ತು. ಕೃಷಿ ವಲಯ ಮತ್ತು ರೈತರ ಭವಿಷ್ಯವನ್ನು ಸರ್ಕಾರಗಳು ಸುಧಾರಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶದ ಎಲ್ಲಾ ರೈತರಿಂದ ಎಂಎಸ್‌ಪಿಯಡಿ ಬೆಳೆಗಳ ಸಂಪೂರ್ಣ ಖರೀದಿ ಖಚಿತಪಡಿಸಿಕೊಳ್ಳುವುದು, ಎಂಎಸ್‌ಪಿ ಗ್ಯಾರಂಟಿ ಕಾನೂನನ್ನು ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆರಂಭಿಸಿರುವ ರೈತ ಜಾಗೃತಿ ಯಾತ್ರೆ ಮಂಡ್ಯ ನಗರಕ್ಕೆ ಆಗಮಿಸಿದಾಗ ರೈತ ಸಂಘದ ಮುಖಂಡರು ಸ್ವಾಗತಿಸಿದರು.

ಕಿಸಾನ್ ಮೋರ್ಚಾ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರು ಮತ್ತು ಕೃಷಿ ವಲಯವನ್ನು ಸರ್ಕಾರಗಳು ದೀರ್ಘಕಾಲದವರೆಗೆ ನಿರ್ಲಕ್ಷಿಸಿವೆ. ಕೃಷಿ ವಲಯವು ಭಾರತದ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಕೋವಿಡ್-೧೯ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಕಾರ್ಖಾನೆಗಳು ಮುಚ್ಚಲ್ಪಟ್ಟಾಗಲೂ ಕೃಷಿ ವಲಯವು ಶೇ.೩.೬ ದರದಲ್ಲಿ ಬೆಳೆಯುತ್ತಿತ್ತು. ಕೃಷಿ ವಲಯ ಮತ್ತು ರೈತರ ಭವಿಷ್ಯವನ್ನು ಸರ್ಕಾರಗಳು ಸುಧಾರಿಸಬೇಕು ಎಂದು ಆಗ್ರಹಿಸಿದರು.

೨೦೧೧ರಲ್ಲಿ ಗ್ರಾಹಕ ವ್ಯವಹಾರಗಳ ಕಾರ್ಯಕಾರಿ ಗುಂಪಿನ ಅಧ್ಯಕ್ಷರಾಗಿದ್ದ ಪ್ರಸ್ತುತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಆಗಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು, ಬೆಳೆ ಖರೀದಿಗೆ ಸಂಬಂಧಿಸಿದ ರೈತ ಮತ್ತು ಖರೀದಿದಾರರ ನಡುವಿನ ವಹಿವಾಟು ಸರ್ಕಾರ ಘೋಷಿಸಿದ ಎಂಎಸ್‌ಪಿಗಿಂತ ಕಡಿಮೆ ಇರಬಾರದು ಎಂದು ಶಾಸನಬದ್ದ ನಿಬಂಧನೆಗಳ ಮೂಲಕ ಖಚಿತಪಡಿಸಿಕೊಳ್ಳಲು ಶಿಫಾರಸು ಮಾಡಿದ್ದರು. ಅದನ್ನು ಈಗ ಮರೆತಿದ್ದೀರಾ ಎಂದು ಪ್ರಶ್ನಿಸಿದರು.

ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಮತ್ತು ಕೃಷಿ ಕ್ಷೇತ್ರದ ಸ್ಥಿತಿಯನ್ನು ಸುಧಾರಿಸಲು ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುತ್ತೇವೆಂದು ಹೇಳಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಾತು ತಪ್ಪಿದೆ. ೨೦೧೮ ರಲ್ಲಿ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಸಾಮಾಜಿಕ ನಾಯಕ ಅಣ್ಣಾ ಹಜಾರೆ ಅವರು ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರಲು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಆಗ ಆರು ತಿಂಗಳಲ್ಲಿ ಜಾರಿಗೆ ತರುತ್ತೇವೆಂದು ಹೇಳಿ ಇನ್ನೂ ಜಾರಿಗೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಕಬ್ಬಿನ ಎಫ್‌ಆರ್‌ಪಿ ಕ್ವಿಂಟಾಲ್‌ಗೆ ಕನಿಷ್ಠ ೬೦೦೦ ರು. ಹೊಲದಲ್ಲಿನ ದರ ಎಂದು ಘೋಷಿಸಬೇಕು. ರೈತರಿಗೆ ಪಾವತಿಯನ್ನು ೧೪ ದಿನಗಳಲ್ಲಿ ಖಚಿತ ಪಡಿಸಿಕೊಳ್ಳಬೇಕು. ವಿಫಲವಾದಲ್ಲಿ ರೈತರಿಗೆ ಹೆಚ್ಚುವರಿಯಾಗಿ ಶೇ.೧೨ ರಿಂದ ೧೫ ಬಡ್ಡಿ ಪಾವತಿಸಬೇಕು. ಹವಾಮಾನ ಬದಲಾವಣೆಯು ಬರ ಮತ್ತು ಪ್ರವಾಹದ ಘಟನೆಗಳನ್ನು ಹೆಚ್ಚಿಸಲು ಕಾರಣವಾಗುತ್ತಿದೆ. ರೈತರಿಗೆ ಆಗುವ ನಷ್ಟ ಸರಿದೂಗಿಸಲು ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.

ರೈತ ನಾಯಕರಾದ ಪಂಜಾಬ್‌ನ ಜಗಜಿತ್ ಸಿಂಗ್ ದಲ್ಲೆವಾಲ್, ಹರಿಯಾಣ ಅಭಿಮಾನ್ ಕೊಹಾರ್, ಹರ್ಕಲೀಂದರ್ ಸಿಂಗ್ ಧಿಲ್ಲೋನ್, ಮುಖಂಡರಾದ ರಾಮಲಿಂಗೇಗೌಡ, ಬೂದನೂರು ಪುಟ್ಟಸ್ವಾಮಿ, ಹೆಮ್ಮಿಗೆ ಚಂದ್ರಶೇಖರ್, ಕೋಣನಹಳ್ಳಿ ಜವರಪ್ಫ, ಶಿವಳ್ಳಿ ಚಂದ್ರು ಇತರರು ಭಾಗವಹಿಸಿದ್ದರು.