ದೊಡ್ಡಬಳ್ಳಾಪುರ: ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಬಹುವರ್ಗದ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷರಾದ ಮೀನಾಕ್ಷಿ ಸುಂದರಂ ಆರೋಪಿಸಿದರು

ದೊಡ್ಡಬಳ್ಳಾಪುರ: ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಬಹುವರ್ಗದ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷರಾದ ಮೀನಾಕ್ಷಿ ಸುಂದರಂ ಆರೋಪಿಸಿದರು.

ಇಲ್ಲಿನ ಬೆಸೆಂಟ್‌ ಪಾರ್ಕ್‌ನಲ್ಲಿ ಭಾನುವಾರ ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಈ ನಾಲ್ಕು ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡವನ್ನೂ ತರಲಾಗಿತ್ತು. ಕೇಂದ್ರ ಸರ್ಕಾರ ಪ್ರಕಟಿಸಿದ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಹಾಗು ಸಿಐಟಿಯು ಸಂಘಟನೆ ಸಲ್ಲಿಸಿದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸದೆ, ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿ ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಕೇಂದ್ರ ಸರ್ಕಾರ ದುಡಿಯುವ ವರ್ಗದ ವಿರುದ್ದ ತನ್ನ ಕಪಟ ನೀತಿಯನ್ನು ಮುಂದುವರೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

2019ರಲ್ಲಿ ವೇತನ ಸಂಹಿತೆ ಜಾರಿಗೊಂಡ ನಂತರ ಹಲವು ಪ್ರತಿಭಟನೆಗಳು ನಡೆದವು. ಅಖಿಲ ಭಾರತ ಮುಷ್ಕರದ ಮೂಲಕ ಪ್ರತಿಭಟನೆ ಮಾಡಲಾಗಿತ್ತು. ಕೈಗಾರಿಕಾ ಸಂಬಂಧ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ,ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಸ್ಥಿತಿಗತಿ ಸಂಹಿತೆ ಜಾರಿಗೊಂಡಾಗಳು ಆಕ್ರೋಶ ವ್ಯಕ್ತವಾಗಿತ್ತು. ಈ ಸಂಹಿತೆಗಳ ಜಾರಿಯ ವಿರುದ್ಧ ನಡೆದ ಸಾರ್ವತ್ರಿಕ ಮುಷ್ಕರದಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು. ದೇಶದ ಕಾರ್ಮಿಕ ವರ್ಗ ನಿರಂತರವಾಗಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರೂ, ದೇಶದ ದುಡಿಯುವ ಜನರ ಅಭಿಪ್ರಾಯಗಳನ್ನು ತಿರಸ್ಕರಿಸಿ, ವಿದೇಶಿ ಹಾಗು ಸ್ವದೇಶಿ ಕಾರ್ಪೊರೇಟ್ ಬಂಡವಾಳಿಗರ ಅನುಕೂಲಕ್ಕಾಗಿ ಈ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಸರ್ಕಾರ ಹಠಮಾರಿ ಧೋರಣೆಯೊಂದಿಗೆ, ಕೇಂದ್ರ ಕಾರ್ಮಿಕ ಸಂಘಗಳ ಯಾವುದೇ ಮನವಿಗಳು, ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಲಕ್ಷಿಸದೆ, ಬಂಡವಾಳಶಾಹಿಗಳ ಬೇಡಿಕೆಗಳನ್ನು ಪೂರೈಸಲು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ. ಇದು ಅತ್ಯಂತ ದೇಶದ್ರೋಹಿ ಕ್ರಮವಾಗಿದೆ. ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಹಾಗು ಸವಲತ್ತುಗಳನ್ನು ನಾಶ ಮಾಡುವ ಕ್ರಮ ಇದಾಗಿದೆ. ಬಂಡವಾಳಿಗರು ಮಾಡುತ್ತಿದ್ದ ಎಲ್ಲಾ ಕಾನೂನು ಉಲ್ಲಂಘನೆಗಳನ್ನು ಕಾನೂನು ಬದ್ಧಗೊಳಿಸುವುದಲ್ಲದೆ, ಖಾಯಂ ಉದ್ಯೋಗದ ಅವಕಾಶಗಳೇ ಭಾರತೀಯ ಯುವ ಪೀಳಿಗೆಗಳಿಗೆ ಇಲ್ಲದಂತೆ ಮಾಡುವ ಕ್ರಮವಾಗಿದೆ. ನವ ಗುಲಾಮಗಿರಿಗೆ ಕಾರ್ಮಿರನ್ನು ಒಳಪಡಿಸುವ ಕುತಂತ್ರವಾಗಿದೆ ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್ ಸಂಘಟನಾ ಕಾರ್ಯ ಯೋಜನೆ ಮಂಡಿಸಿ ಮಾತನಾಡಿ, ಸಿಐಟಿಯು ಸಂಘಟನೆಯು ಈ ಸಂಹಿತೆಗಳನ್ನು ಕಾರ್ಮಿಕರ ಜೀವನ ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳೆಂದು ಪರಿಗಣಿಸುತ್ತವೆ. ಇವು ಕಾರ್ಮಿಕರ ಮೇಲೆ ಗುಲಾಮಗಿರಿಯನ್ನು ಹೇರುವುದು ಮಾತ್ರವಲ್ಲದೇ, ಕಾರ್ಮಿಕರ ಪ್ರತಿಯೊಂದು ಹಕ್ಕು ಹಾಗು ಪ್ರತಿಭಟಿಸುವ ಅವಕಾಶಗಳನ್ನು ಕಸಿದುಕೊಳ್ಳುತ್ತವೆ. ನಮ್ಮ ದೇಶದ ಮುಂದಿನ ತಲೆಮಾರುಗಳ ಸಮಸ್ತ ಭರವಸೆ, ನಂಬಿಕೆ ಮತ್ತು ಆಕಾಂಕ್ಷೆಗಳನ್ನು ನಂದಿಸಿಬಿಡುತ್ತವೆ''''''''ಎಂದು ಟೀಕಿಸಿದರು.

ಗಾಢವಾಗುತ್ತಿರುವ ನಿರುದ್ಯೋಗದ ಬಿಕ್ಕಟ್ಟು, ಏರುತ್ತಿರುವ ಹಣದುಬ್ಬರ, ಬೆಲೆ ಏರಿಕೆ ಹಾಗು ಜೀವನದ ಕಷ್ಟಗಳನ್ನು ದೇಶದ ಜನರು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಉತ್ತರ ಭಾರತದಲ್ಲಿ ಬುಗಿಲೆದ್ದ ಕಾರ್ಮಿಕರ ಸ್ವಯಂ ಪ್ರೇರಿತ ಹೋರಾಟದ ಅಲೆಗಳು ಶ್ರಮಜೀವಿಗಳ ಹೊರಹೊಮ್ಮಿದ ಭಾವನೆಗಳಾಗಿವೆ. ಇದು ದೇಶದ ಸರ್ಕಾರವು ತನ್ನ ಸ್ವಂತ ಪ್ರಜೆಗಳ ಮೇಲೆ ಸಾರಿರುವ ಅಮಾನವೀಯ ಯುದ್ಧ ಘೋಷಣೆಗೆ ಸಮನಾದ ಕ್ರಮವಾಗಿದೆ ಎಂದು ಸಿಐಟಿಯು ಪರಿಗಣಿಸುತ್ತದೆ ಎಂದರು.

ವ್ಯಾಪಕ ಹೋರಾಟಕ್ಕೆ ಕರೆ:

ಕೇಂದ್ರ ಸರ್ಕಾರದ ಈ ಪ್ರಜಾವಿರೋಧಿ ನಿರ್ಧಾರದ ವಿರುದ್ಧ, ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯಿಸಿ ಈ ಕೂಡಲೇ ವ್ಯಾಪಕ ಪ್ರತಿಭಟನೆಗಳನ್ನು ಮಾಡಲು ಸಿಐಟಿಯು ರಾಜ್ಯ ಸಮಿತಿಯು ಕರೆ ನೀಡಿದ್ದು, ರಾಜ್ಯ ಸರ್ಕಾರವು ಈ ಸಂಹಿತೆಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬಾರದೆಂದು ಒತ್ತಾಯಿಸುತ್ತದೆ. ದೇಶದ ಸಂವಿಧಾನವು ಖಾತರಿ ಪಡಿಸುವ ಒಕ್ಕೂಟ ತತ್ವಗಳನ್ನು ಆಧರಿಸಿ ರಾಜ್ಯ ಸರ್ಕಾರವು ರಾಜ್ಯದ ಶ್ರಮ ಜೀವಿಗಳ ಹಿತವನ್ನು ರಕ್ಷಿಸಲು ಮುಂದಾಗಬೇಕು ಎಂದು ಸಿಐಟಿಯು ಒತ್ತಾಯಿಸುತ್ತದೆ ಎಂದು ತಿಳಿಸಿದರು.

ಮೇ12ರಂದು ಪ್ರತಿಭಟನೆಗೆ ಕರೆ:

ಸಿಐಟಿಯು ಅಖಿಲ ಭಾರತ ಸಮಿತಿಯು ನೀಡಿರುವ ಕರೆಯ ಅನ್ವಯ ಮೇ.12ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗು ಕೆಲಸದ ಸ್ಥಳಗಳಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಗಳ ಪ್ರತಿಗಳನ್ನು ಸಾಮೂಹಿಕವಾಗಿ ಸುಡುವ ಮೂಲಕ ಪ್ರತಿಭಟಿಸಲುಸಿಐಟಿಯು ಕರ್ನಾಟಕ ರಾಜ್ಯ ಸಮಿತಿಯು ಕರೆ ನೀಡಿದೆ.

ಸಮಾವೇಶದಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಮೋಹನ್ ಬಾಬು, ಉಪಾಧ್ಯಕ್ಷರಾದ ತಿರುಮಲಾಚಾರಿ, ಬಸವರಾಜು, ವೀರಣ್ಣ, ಶಂಬಣ್ಣ, ವಿಷಕಂಠ, ಮಂಜುನಾಥ, ಕಾರ್ಯದರ್ಶಿಗಳಾದ ಅಂಜುಮ್ ಖಾನ್, ಎಲ್.ಸಿ.ಸುಮಾ, ವೈ.ಎಸ್.ಮಧು ಅನಿಲ್ ಗುಪ್ತ, ವೆಂಕಟೇಶ್ ಇತರರು ಉಪಸ್ಥಿತರಿದ್ದರು.

10ಕೆಡಿಬಿಪಿ4-

ದೊಡ್ಡಬಳ್ಳಾಪುರದಲ್ಲಿ ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಗಾರ ನಡೆಯಿತು.