ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸಿವಿಲ್ ಇಂಜಿನಿಯರಿಂಗ್ ಉದ್ಯಮ ಮತ್ತು ವೃತ್ತಿಗೆ ಮಾನ್ಯತೆ, ನಿಯಂತ್ರಣ ಸಿಗಲು ಕಾಯ್ದೆ ತರುವುದು ಅತ್ಯವಶ್ಯವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಜಗನ್ನಾಥ ಹಾಲಂಗೆ ಹೇಳಿದರು.ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರರ ಕಾಯ್ದೆ (ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಆ್ಯಕ್ಟ್- ಕೆಪಿಸಿಇಎ) ಜಾರಿ ಕುರಿತು ನಗರದ ಸರ್ ಎಂ. ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಾದ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ವೃತ್ತಿಯಲ್ಲಿರುವ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡೋಣ ಎಂದರು.
ಕಾಯ್ದೆ ಬರುವುದರಿಂದ ಸಿವಿಲ್ ಇಂಜಿನಿಯರ್‌ಗಳ ಅನೇಕ ಸಮಸ್ಯೆಗಳು ಪರಿಹಾರಗೊಳ್ಳಲಿವೆ. ವೃತ್ತಿಯ ಘನತೆ, ಗೌರವ ಹೆಚ್ಚಲಿದೆ ಎಂದರು.ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ರಾಜ್ಯ ಘಟಕದ ಅಧ್ಯಕ್ಷ ಎಂ. ನಾಗರಾಜ ಮಾತನಾಡಿ, ಈ ಕಾಯ್ದೆ ರಾಜ್ಯದಲ್ಲಿ ಜಾರಿಗೊಳ್ಳುವುದರ ಜೊತೆಗೆ ರಾಷ್ಟ್ರ ಮಟ್ಟದಲ್ಲೂ ಜಾರಿಗೆ ಬರುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದರು.
ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರರ ಕಾಯ್ದೆ ನಿರೂಪಣಾ ಒಕ್ಕೂಟದ ಚೇರ್‍ಮನ್ ಶ್ರೀಕಾಂತ ಚನ್ನಾಳ, ಕಾರ್ಯದರ್ಶಿ ಅಜಿತ್ ಕುಮಾರ್ ಮಾತನಾಡಿ ಕಾಯ್ದೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಡಿ. ರಂಗನಾಥ ಅವರು ಸಂವಾದ ನಡೆಸಿಕೊಟ್ಟರು.ಕಾನೂನು ಇಲಾಖೆಯ ಉಪ ಕಾರ್ಯದರ್ಶಿ ಬಿ.ಕೆ. ಗಿರೀಶ್, ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಕಲಬುರಗಿ ಘಟಕದ ಅಧ್ಯಕ್ಷ ಶ್ರೀಧರ ಪಾಂಡೆ, ಸಿವಿಲ್ ಇಂಜಿನಿಯರ್ಸ್ ಸಂಘದ ಅಧ್ಯಕ್ಷ ದೀಪಕ ಕೌಲಗಿಕರ್ ಮತ್ತಿತರರು ವೇದಿಕೆಯ ಮೇಲಿದ್ದರು. ನೆರೆಯ ವಿಜಯಪುರ ಹಾಗೂ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 500ಕ್ಕೂ ಹೆಚ್ಚು ಸಿವಿಲ್ ಇಂಜಿನಿಯರರು, ಲೋಕೋಪಯೋಗಿ ಇಲಾಖೆಯ ಇಂಜಿನಿಯರರು, ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಆ್ಯಕ್ಟ್ ಸ್ಟೀರಿಂಗ್ ಕನ್ಸೋರ್ಟಿಯಂ ಸದಸ್ಯರು ಭಾಗವಹಿಸಿದ್ದರು.