ಏಕಾಗ್ರತೆಯಿಂದ ನಿರಂತರ ಅಧ್ಯಯನದಲ್ಲಿ ತೊಡಗಿ: ಡಾ. ಉಮೇಶಪ್ಪ

| Published : Feb 08 2024, 01:35 AM IST

ಏಕಾಗ್ರತೆಯಿಂದ ನಿರಂತರ ಅಧ್ಯಯನದಲ್ಲಿ ತೊಡಗಿ: ಡಾ. ಉಮೇಶಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಜೀವನ ಬದುಕಿನ ಅತ್ಯಂತ ಮಹತ್ವದ ಘಟ್ಟ. ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ನಿರ್ಧರಿಸುವ ಪ್ರಮುಖ ಹಂತ.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಡಿಡಿಪಿಯು

ಕನ್ನಡಪ್ರಭ ವಾರ್ತೆ ಹಾವೇರಿ

ವಿದ್ಯಾರ್ಥಿ ಜೀವನ ಬದುಕಿನ ಅತ್ಯಂತ ಮಹತ್ವದ ಘಟ್ಟ. ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ನಿರ್ಧರಿಸುವ ಪ್ರಮುಖ ಹಂತ. ಅನ್ಯ ವಿಷಯಗಳಿಗೆ ಗಮನಕೊಡದೇ ಏಕಾಗ್ರತೆಯಿಂದ ನಿರಂತರ ಅಧ್ಯಯನದಲ್ಲಿ ತೊಡಗಿದರೆ ಯಶಸ್ಸು ಶತಸಿದ್ಧ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಉಮೇಶಪ್ಪ ಎಚ್. ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ೨೦೨೩-೨೪ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಿರ್ದಿಷ್ಟ ಗುರಿಯೊಂದಿಗೆ ಪರಿಶ್ರಮದ ಬೆವರು ಹರಿಸಿದರೆ ಸುಂದರ ಭವಿಷ್ಯ ಕಟ್ಟಿಕೊಳ್ಳಬಹುದು. ಆದ್ದರಿಂದ ವಿದ್ಯಾರ್ಥಿನಿಯರು ಸಿಗುವ ಸದಾವಕಾಶಗಳನ್ನು ಸಕರಾತ್ಮಕವಾಗಿ ಬಳಸಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು. ಇಂದು ಜ್ಞಾನ ಜಗತ್ತನ್ನೇ ಆಳುತ್ತಿದೆ. ಜ್ಞಾನ ಪಡೆದವರು ದೊಡ್ಡ ಹುದ್ದೆ ಮತ್ತು ಅವಕಾಶಗಳನ್ನು ಪಡೆಯಲು ಸಾಧ್ಯವಿದೆ. ಜ್ಞಾನ ಮತ್ತು ಕೌಶಲ್ಯ ಹೊಂದಿದವರಿಗೆ ಜಗತ್ತಿನಲ್ಲಿ ಅವಕಾಶಗಳ ಬಾಗಿಲು ತೆರೆಯುತ್ತಿವೆ. ಆದ್ದರಿಂದ ವಿದ್ಯಾರ್ಥಿನಿಯರು ಜ್ಞಾನದ ಬಲದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಮಾತನಾಡಿ, ಸಂಸ್ಥೆಗೆ ವಿದ್ಯಾರ್ಥಿನಿಯರೇ ಆಧಾರ ಸ್ತಂಭ. ಅವರ ಸರ್ವತೋಮುಖ ಬೆಳವಣಿಗೆಗೆ ಸಿಬ್ಬಂದಿಯಲ್ಲಾ ಒಟ್ಟಾಗಿ ಶ್ರಮಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿನಿಯರ ಸಂಖ್ಯೆ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಗಣನೀಯವಾಗಿ ಹೆಚ್ಚುತ್ತಿದೆ. ಪಠ್ಯ ಮತ್ತು ವಿವಿಧ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿನಿಯರಿಗೆ ಸೂಕ್ತ ಮಾರ್ಗದರ್ಶನ ಮತ್ತು ಮೌಲ್ಯಗಳನ್ನ ಬಿತ್ತರಿಸಲಾಗುತ್ತಿದೆ. ಹೀಗೆಯೇ ಜನಪ್ರತಿನಿಧಿಗಳ, ಅಧಿಕಾರಿಗಳ ಸಹಕಾರ ಮತ್ತು ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಮಕ್ಕಳ ಭವಿಷ್ಯ ರೂಪಿಸುವ ಕೈಂಕರ್ಯ ನಡೆಯುತ್ತಿದೆ. ಇದು ಹೀಗೆ ಮುಂದುವರೆಯಲಿ ಎಂದು ಆಶಿಸಿದರು.

ಮತ್ತೋರ್ವ ಅತಿಥಿ ಉದ್ಯಮಿ, ಸಮಾಜಸೇವಕ ಪ್ರಕಾಶ ಶೆಟ್ಟಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಚಾರ್ಯ ನಾಗರಾಜ ಹಕ್ಕೇರ ಮಾತನಾಡಿ, ಕಾಲೇಜಿನಲ್ಲಿರುವ ಸಣ್ಣಪುಟ್ಟ ಮೂಲಭೂತ ಸಮಸ್ಯೆಗಳನ್ನು ಎಲ್ಲರ ಸಹಕಾರದಿಂದ ಬಗೆಹರಿಸಿಕೊಂಡು ವಿದ್ಯಾರ್ಥಿನಿಯರಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತೇನೆ ಎಂದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಾಧಕರನ್ನ ಗೌರವಿಸಲಾಯಿತು. ಎಲ್ಲಾ ಅತಿಥಿಗಳನ್ನ ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಹಿರಿಯ ಉಪನ್ಯಾಸಕರಾದ ವಿ.ಟಿ. ಹೊನ್ನಪ್ಪನವರ, ಎಸ್.ಸಿ. ಮರಡಿ, ಸಿ.ಎಂ. ಕಮ್ಮಾರ, ರವಿ ಸಾದರ, ವಿ.ಎಸ್. ಪಾಟೀಲ, ಪುಷ್ಪಲತಾ ಡಿ.ಎಲ್., ಮಂಜುನಾಥ ಹತ್ತಿಯವರ, ಸುನಂದಾ ಶೀಲಿ, ಅಶೋಕ ಕಹಾರ, ವಿಶ್ವನಾಥ, ವಿಶಾಲಾಕ್ಷಿ, ಹೊಳಲಮ್ಮ ಇತರರು ಇದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.

ವಿದ್ಯಾರ್ಥಿನಿ ಕಲ್ಪನಾ ಎಂ.ಟಿ. ಪ್ರಾರ್ಥಿಸಿದರು. ಚೈತ್ರ ಹಳೇಮನಿ ಸ್ವಾಗತಿಸಿದರು. ಪ್ರಿಯಾ ಮಾಳದ್ಕರ್ ಮತ್ತು ದೀಕ್ಷಿತಾ ಕಳ್ಳಿಮನಿ ನಿರೂಪಿಸಿದರು. ನಿರ್ಮಲಾ ಎಲಿಗಾರ ವಂದಿಸಿದರು.