ಪೈಲಟ್ ಸೇರಿದಂತೆ ಸಿಬ್ಬಂದಿಗಳ ಕೊರತೆ, ತಾಂತ್ರಿಕ ಸಮಸ್ಯೆಗಳಿಂದ ದೇಶಾದ್ಯಂತ ಬುಧವಾರ 200ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಇಂಡಿಗೋ ಏರ್‌ಲೈನ್ಸ್ ರದ್ದುಗೊಳಿಸಿದ ಪರಿಣಾಮ ಹುಬ್ಬಳ್ಳಿಯಲ್ಲಿ ನಡೆಯಬೇಕಾಗಿದ್ದ ನೂತನ ವಧು-ವರರ ಆರತಕ್ಷತೆ ಸಮಾರಂಭಕ್ಕೆ ಮದುಮಕ್ಕಳೇ ಬರಲು ಆಗದೆ, ಆನ್‌ಲೈನ್ ಮೂಲಕವೇ ಆರತಕ್ಷತೆ ನಡೆಸಿದ ಅಪರೂಪದ ಪ್ರಸಂಗ ನಡೆದಿದೆ. ವಧುವಿನ ತಂದೆ-ತಾಯಿಯೇ ಮಗಳು-ಅಳಿಯನ ಬದಲು ಕುಳಿತು ಆನ್‌ಲೈನ್‌ನಲ್ಲಿ ಆರತಕ್ಷತೆ ಸಂಪ್ರದಾಯ, ಶಾಸ್ತ್ರ ಮುಗಿಸಿದ್ದಾರೆ.
- ಇಂಡಿಗೋ ವಿಮಾನ ರದ್ದು । ಕಡೇ ಗಳಿಗೆಯಲ್ಲಿ ಒಡಿಶಾದಲ್ಲೇ ಸಿಲುಕಿದ ನವದಂಪತಿ
- ಆನ್‌ಲೈನಲ್ಲೇ ಸಮಾರಂಭ । ಮದುಮಕ್ಕಳ ಜಾಗದಲ್ಲಿ ಕೂತ ವಧುವಿನ ತಂದೆ-ತಾಯಿ
---ಶಿವಾನಂದ ಗೊಂಬಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪೈಲಟ್ ಸೇರಿದಂತೆ ಸಿಬ್ಬಂದಿಗಳ ಕೊರತೆ, ತಾಂತ್ರಿಕ ಸಮಸ್ಯೆಗಳಿಂದ ದೇಶಾದ್ಯಂತ ಬುಧವಾರ 200ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಇಂಡಿಗೋ ಏರ್‌ಲೈನ್ಸ್ ರದ್ದುಗೊಳಿಸಿದ ಪರಿಣಾಮ ಹುಬ್ಬಳ್ಳಿಯಲ್ಲಿ ನಡೆಯಬೇಕಾಗಿದ್ದ ನೂತನ ವಧು-ವರರ ಆರತಕ್ಷತೆ ಸಮಾರಂಭಕ್ಕೆ ಮದುಮಕ್ಕಳೇ ಬರಲು ಆಗದೆ, ಆನ್‌ಲೈನ್ ಮೂಲಕವೇ ಆರತಕ್ಷತೆ ನಡೆಸಿದ ಅಪರೂಪದ ಪ್ರಸಂಗ ನಡೆದಿದೆ. ವಧುವಿನ ತಂದೆ-ತಾಯಿಯೇ ಮಗಳು-ಅಳಿಯನ ಬದಲು ಕುಳಿತು ಆನ್‌ಲೈನ್‌ನಲ್ಲಿ ಆರತಕ್ಷತೆ ಸಂಪ್ರದಾಯ, ಶಾಸ್ತ್ರ ಮುಗಿಸಿದ್ದಾರೆ.ಆಗಿದ್ದೇನು?:
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿರುವ ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಹಾಗೂ ಭುವನೇಶ್ವರದ ಸಂಗಮ ದಾಸ್, ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದವರು ಒಪ್ಪಿ ಇಬ್ಬರ ಮದುವೆಯನ್ನು ಭುವನೇಶ್ವರದಲ್ಲಿ ನ.23ರಂದು ನೆರವೇರಿಸಿದ್ದರು. ವಧುವಿನ ತವರು ಹುಬ್ಬಳ್ಳಿಯಲ್ಲಿ ಡಿ.3ರಂದು ಆರತಕ್ಷತೆ ಆಯೋಜಿಸಿದ್ದರು. ಇದಕ್ಕಾಗಿ ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವಧು ಹಾಗೂ ವರನ ಸಂಬಂಧಿಕರೂ ಬಂದಿದ್ದರು. ವಧು-ವರರು ಭುವನೇಶ್ವರದಿಂದ ಬೆಂಗಳೂರಿಗೆ, ಅಲ್ಲಿಂದ ಹುಬ್ಬಳ್ಳಿಗೆ ಡಿ.2ಕ್ಕೆ ವಿಮಾನ ಬುಕ್ ಮಾಡಿದ್ದರು. ಕೆಲ ಸಂಬಂಧಿಕರಿಗೆ ಭುವನೇಶ್ವರದಿಂದ ಮುಂಬೈ, ಅಲ್ಲಿಂದ ಹುಬ್ಬಳ್ಳಿಗೆ ವಿಮಾನ ಟಿಕೆಟ್ ಬುಕ್ ಆಗಿತ್ತು.ಆದರೆ, ಡಿ.2ರ ಬೆಳಗ್ಗೆ 9ರಿಂದ ಮರುದಿನ (ಡಿ.3) ಬೆಳಗಿನ ಜಾವ 4-5ರವರೆಗೂ ವಿಮಾನ ವಿಳಂಬವಾಗುತ್ತಿದೆ ಎಂದು ಹೇಳಿಕೊಂಡೇ ಬಂದಿದ್ದ ಇಂಡಿಗೋ ಸಿಬ್ಬಂದಿ, ಡಿ.3ರ ಬೆಳಗ್ಗೆ ವಿಮಾನ ರದ್ದಾಗಿದೆ ಎಂದಿದ್ದರು. ಹೀಗಾಗಿ, ಬರಲು ಯಾವುದೇ ಅನ್ಯ ಮಾರ್ಗ ತಿಳಿಯದೆ ವಧು-ವರ, ಪಾಲಕರೆಲ್ಲರೂ ಭುವನೇಶ್ವರದಲ್ಲಿಯೇ ಉಳಿದರು. ಇತ್ತ ಹುಬ್ಬಳ್ಳಿಯಲ್ಲಿ ವಧುವಿನ ತಂದೆ-ತಾಯಿ, ಸಂಬಂಧಿಕರು ಅವರಿಗಾಗಿ ಕಾಯುತ್ತಿದ್ದರು. ಈ ಮಧ್ಯೆ, ಕಲ್ಯಾಣ ಮಂಟಪ ಬುಕ್ ಆಗಿತ್ತು. ಜತೆಗೆ, ಎಲ್ಲ ತಯಾರಿಗಳೂ ಮುಗಿದಿದ್ದವು.
ಕೊನೆಗೆ ಏನು ಮಾಡಬೇಕು ಎಂಬುದು ತಿಳಿಯದೆ, ಹುಬ್ಬಳ್ಳಿಯಲ್ಲಿ ವಧುವಿನ ತಂದೆ-ತಾಯಿಯೇ ವಧು-ವರರ ಕುರ್ಚಿಯಲ್ಲಿ ಕುಳಿತು, ಶಾಸ್ತ್ರ ಮುಗಿಸಿದರು. ಅತ್ತ ವಧು-ವರ, ತಾವೂ ತಯಾರಾಗಿ ಭುವನೇಶ್ವರದಲ್ಲಿ ಕುಳಿತರು. ಮುಹೂರ್ತಕ್ಕೆ ಸರಿಯಾಗಿ ಆನ್‌ಲೈನ್ (ವಿಡಿಯೋ ಕಾನ್ಫರೆನ್ಸ್) ಮೂಲಕವೇ ಆರತಕ್ಷತೆ ಮುಗಿಸಿದರು.ಬಂದ ಸಂಬಂಧಿಕರು ವರ್ಚುವಲ್ ಮೂಲಕವೇ ವಧು-ವರರನ್ನು ಕಂಡು ಆಶೀರ್ವಾದ ಮಾಡಿ, ತಂದೆ-ತಾಯಿಗೆ ಗಿಫ್ಟ್ ಕೊಟ್ಟರು. ಅತ್ತ ವಧು-ವರ ಕೂಡ ಆನ್‌ಲೈನ್ ಮೂಲಕವೇ ಹುಬ್ಬಳ್ಳಿಯಲ್ಲಿ ಪಾಲ್ಗೊಂಡ ಸಂಬಂಧಿಕರಿಂದ ಆಶೀರ್ವಾದ ಪಡೆದರು.
ಇಂಡಿಗೋ ಸಂಸ್ಥೆಯವರು ಒಂದೆರಡು ದಿನ ಮೊದಲೇ ವಿಮಾನ ರದ್ದಾಗಿರುವುದನ್ನು ತಿಳಿಸಿದ್ದರೆ ಬೇರೆ ವ್ಯವಸ್ಥೆ ಮೂಲಕವಾದರೂ ಬಂದು ಆರತಕ್ಷತೆಯಲ್ಲಿ ಪಾಲ್ಗೊಳ್ಳಬಹುದಿತ್ತು. ಆದರೆ, ಕೊನೆಯವರೆಗೂ ವಿಮಾನ ಈಗ ಹೊರಡಲಿದೆ, ಆಗ ಹೊರಡುತ್ತದೆ ಎಂದು ಕಾಲಹರಣ ಮಾಡುತ್ತಲೇ ಸಾಗಿದ್ದರಿಂದ ಹಾಗೂ ಸರಿಯಾಗಿ ಮಾಹಿತಿ ನೀಡದೇ ಇದ್ದುದರಿಂದ ವಧು-ವರರಿಲ್ಲದೇ ಆರತಕ್ಷತೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಸಂಬಂಧಿಕರು ಕಿಡಿಕಾರಿದ್ದಾರೆ. ಆದರೂ, ಆಧುನಿಕ ತಂತ್ರಜ್ಞಾನದಿಂದ ಆನ್‌ಲೈನ್‌ನಲ್ಲಾದರೂ ವಧು-ವರ ಪಾಲ್ಗೊಂಡಂತಾಯಿತಲ್ಲ, ಅಷ್ಟು ಸಾಕು ಎಂದು ಸಮಾಧಾನ ಪಟ್ಟುಕೊಂಡು ಎಲ್ಲರೂ ಆರತಕ್ಷತೆಯ ಊಟಕ್ಕೆ ಅಣಿಯಾದರು.ಕೋಟ್....
ನ.23ಕ್ಕೆ ಭುವನೇಶ್ವರದಲ್ಲಿ ಮದುವೆಯಾಗಿತ್ತು. ಡಿ.3ಕ್ಕೆ ಹುಬ್ಬಳ್ಳಿಯಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಡಿ.2ಕ್ಕೆ ವಿಮಾನದ ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ, 18-20 ಗಂಟೆ ಕಾಯಿಸಿ ನಂತರ ವಿಮಾನ ರದ್ದಾಗಿದ್ದನ್ನು ಪ್ರಕಟಿಸಿದರು. ಇದರಿಂದಾಗಿ ಆನ್‌ಲೈನ್ ಮೂಲಕವೇ ಆರತಕ್ಷತೆ ನಡೆಸುವಂತಾಯಿತು. ಇಲ್ಲಿ ನಾವೇ (ದಂಪತಿ) ಆರತಕ್ಷತೆ ವೇದಿಕೆ ಮೇಲೆ ಕುಳಿತಿದ್ದೆವು.- ಅನಿಲಕುಮಾರ ಕ್ಷೀರಸಾಗರ, ವಧುವಿನ ತಂದೆ4ಎಚ್‌ಯುಬಿ1,1ಎ (ಪೇಜ್ -1ರಲ್ಲಿದೆ).ಭುವನೇಶ್ವರದಿಂದ ಆನ್‌ಲೈನ್‌ನಲ್ಲಿ ಆರತಕ್ಷತೆ ಮಾಡಿಕೊಂಡ ವಧು-ವರರು.