ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪೆಟ್ರೋಲ್ ಬೆಲೆ ಏರಿಕೆಯಲ್ಲಿ ತತ್ತರಿಸಿದ್ದ ಬೈಕ್ ಸವಾರರಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಲ್ಲಿ ನೀರಿನಿಂದಲೆ ಓಡುವಂತಹ ದ್ವಿಚಕ್ರ ವಾಹನದ ಇಂಜಿನ್ ಒಂದನ್ನು ರೂಪಿಸಿದ್ದಾರೆ.ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ 48 ನೇ ರಾಜ್ಯ ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿ ಮತ್ತು ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ನೀರಿನ ಮೂಲಕ ಓಡುವ ದ್ವಿಚಕ್ರ ವಾಹನ ನೋಡುಗರ ಗಮನ ಸೆಳೆಯಿತು.
ಬೆಂಗಳೂರಿನ ಆರ್.ವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಹಮೀದ್, ಆಕಾಶ್, ಕಿರಣ್, ಓಂಪ್ರಕಾಶ್ ತಂಡ ನಿರ್ಮಿಸಿರುವ ಹೈಡ್ರೋಜನ್ ಕಂಬಷನ್ ಎಂಜಿನ್ ನಲ್ಲಿ ನೀರನ್ನು ಎಸ್.ಎಸ್ 304 ಪ್ಲೇಟ್ಸ್ ಮತ್ತು ಕೆಓಹೆಚ್ ಸೊಲ್ಯುಷನ್ ಬಳಸಿ ಹೈಡ್ರೋಜನ್ ಅಂಶವಾಗಿ ಶೇಖರಿಸಲಾಗುತ್ತದೆ. ನಂತರ ಪಲ್ಸ್ ವಿಡ್ತ್ ಮಾಡ್ಯುಲೇಷನ್ (ಪಿಡಬ್ಲ್ಯೂಎಂ) ವಿದ್ಯುತ್ ಸರಾಸರಿ ಪ್ರವಾಹವನ್ನು ನಿಯಂತ್ರಿಸಿ ದ್ವಿಚಕ್ರ ವಾಹನ ಮುಂದುವರಿಯುವಂತೆ ಮಾಡುತ್ತದೆ. 3 ರಿಂದ 4 ಲೀಟರ್ ನೀರಿಗೆ 60 ಕಿಮಿ ದೂರ ಚಲಿಸಲಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.ಹೀಗೆ ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜಿನಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು, ತಮ್ಮ ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಜೊತೆಗೆ ಉತ್ಸುಕತೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಗೀತಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದ ಎಲೆಕ್ಟ್ರಿಕ್ ಆಧಾರಿತ ತಳ್ಳುಗಾಡಿ, ಜೈನ್ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿದ್ದ ವಿದ್ಯುತ್ ಉತ್ಪಾದನೆಗಾಗಿ ಹೆಲಿಕಲ್ ಆರ್ಕಿಮಿಡೀಸ್ ವಿಂಡ್ ಟರ್ಬೈನ್ ಜನರೇಟನ್, ಇಂಡಿಯನ್ ಅಕಾಡೆಮಿ ಪದವಿ ಕಾಲೇಜು ರೂಪಿಸಿದ್ದ ಗಿಡಮೂಲಿಕೆ ಮೂಲಕ ಸೊಳ್ಳೆಗಳನ್ನು ಓಡಿಸುವ ಧೂಪದ್ರವ್ಯ, ರೇವಾ ವಿವಿಯ ವಿದ್ಯಾರ್ಥಿಗಳು ರೂಪಿಸಿದ್ದ ಅಗ್ನಿ ಪತ್ತೆ ಮತ್ತು ನಿಗ್ರಹಕ್ಕಾಗಿ ಅನುಕೂಲವಾಗುವ ಸ್ವಾಯತ್ತ ಡ್ರೋನ್, ನಿಟ್ಟೆ ಮಿನಾಕ್ಷಿ ಕಾಲೇಜಿನ ವಿದ್ಯಾರ್ಥಿಗಳ ಸ್ಥಿರವಾದ ರೆಕ್ಕೆಗಳನ್ನು ಹೊಂದಿದ ಡ್ರೋನ್ ವೈಮಾನಿಕ ವಾಹನ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ್ದ ಜೋಳದ ಹೊಟ್ಟಿನಲ್ಲಿ ಕಪ್ ತಯಾರಿಸಬಲ್ಲ ಯಂತ್ರ ಸೇರಿದಂತೆ 400 ಕ್ಕೂ ಹೆಚ್ಚು ಯೋಜನೆಗಳು ನೋಡುಗರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು.