ಭೂಮಿಯ ಫಲವತ್ತತೆ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಕೊಡುಗೆಯಾಗಿ ನೀಡಬೇಕು
ಮಂಜುನಾಥ ಕೆ.ಎಂ.
ಬಳ್ಳಾರಿ: ರಾಸಾಯನ ಮುಕ್ತ ಆಹಾರ ಸರ್ವರಿಗೂ ಸಿಗುವಂತಾಗಬೇಕು. ಭೂಮಿಯ ಫಲವತ್ತತೆ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಕೊಡುಗೆಯಾಗಿ ನೀಡಬೇಕು ಎಂಬ ಸಮಾಜಮುಖಿ ಕಾಳಜಿಯಿಂದ ವಿದ್ಯಾವಂತ ಯುವಕನೊಬ್ಬ ಪ್ರತಿಷ್ಠಿತ ಕಂಪನಿಯ ಉದ್ಯೋಗ ತೊರೆದು ಸಾವಯವ ಕೃಷಿಯಲ್ಲಿ ತೊಡಗಿ ಯಶಸ್ವಿಯಾಗಿದ್ದಾರೆ.ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಹಾಗೂ ಹಾರ್ಡ್‌ವೇರ್ ಆ್ಯಂಡ್ ನೆಟ್‌ವರ್ಕಿಂಗ್ ಕೋರ್ಸ್ ಪೂರ್ಣಗೊಳಿಸಿರುವ ಜಿಲ್ಲೆಯ ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ಎಂ.ಮನೋಜ್‌ಕುಮಾರ್ ಕಳೆದ ಮೂರು ವರ್ಷಗಳಿಂದ ನಾಲ್ಕು ಎಕರೆ ಪ್ರದೇಶವನ್ನು ಗುತ್ತಿಗೆ ಪಡೆದು ಸಾವಯವ ಪದ್ಧತಿಯಲ್ಲಿ ಒಣ ಮೆಣಸಿನಕಾಯಿ, ಸ್ವಂತದ ಮೂರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಸಾವಯವ ಕೃಷಿಗೆ ಪೂರಕವಾಗಿ ಕಂಪ್ಲಿ ತಾಲೂಕು ಹಳೇದರೋಜಿ ಬಳಿಯ ಸೋಮಲಾಪುರದಲ್ಲಿ ದೇಸಿ ಹಸುಗಳನ್ನು ಸಾಕಿಕೊಂಡು ಹಾಲು ಉತ್ಪಾದನೆ ಮಾಡುತ್ತಿದ್ದಾರೆ.
ಕನ್ನೇರಿ ಮಠ ಪ್ರೇರಣೆ: ಜಿಲ್ಲೆಯ ಸಂಡೂರು ಬಳಿಯ ಜಿಂದಾಲ್ ಕಾರ್ಖಾನೆಯಲ್ಲಿ ಐಟಿ ಎಂಜಿನಿಯರ್ ಆಗಿದ್ದ ಮನೋಜ್‌ಕುಮಾರ್ ಅವರಿಗೆ ಕೆಲಸಕ್ಕೆ ಹಾಜರಾದ ಎರಡೇ ತಿಂಗಳಲ್ಲಿ ಸಾವಯವ ಕೃಷಿಯ ಕಡೆ ಮನಸ್ಸು ವಾಲಿತು. ಈ ಯುವಕನ ಕೃಷಿ ಆಸಕ್ತಿ ಅರಿತ ಬಳ್ಳಾರಿಯ ಸಾವಯವ ಕೃಷಿಕ ಈರಪ್ಪಯ್ಯನವರು ಮಹಾರಾಷ್ಟ್ರದ ಕನ್ನೇರಿ ಮಠದಲ್ಲಿ ಸಾವಯವ ಕೃಷಿ ಸೇರಿದಂತೆ ವಿವಿಧ ಸಾವಯವ ಉತ್ಪನ್ನಗಳ ಕುರಿತು ತರಬೇತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.ಅಂತೆಯೇ ಅಲ್ಲಿಗೆ ತೆರಳಿ ಸಾವಯವ ಕೃಷಿಗೆ ಪೂರಕವಾದ ತರಬೇತಿ ಪಡೆದರು. ಮೂರು ವರ್ಷಗಳಿಂದ ಮೆಣಸಿನಕಾಯಿ ಬೆಳೆಯನ್ನು ಆರಂಭಿಸಿದರು. ಮೊದಲ ವರ್ಷ ಪೂರ್ಣ ಪ್ರಮಾಣದ ಸಿದ್ಧತೆಗೆ ಸಮಯ ಹಿಡಿಯಿತು. ಕಳೆದ ವರ್ಷದಿಂದ ಉತ್ಪನ್ನವನ್ನು ಬೆಳೆದು ಮಾರಾಟಕ್ಕೆ ಅಣಿಗೊಳಿಸಿಕೊಂಡರು. ಬ್ಯಾಡಗಿ ಹಾಗೂ 5531 ಮಾದರಿಯ ಗುಂಟೂರು ಮೆಣಸಿನಕಾಯಿಯನ್ನು ಎಕರೆಗೆ 10 ಕ್ವಿಂಟಲ್ ವರೆಗೆ ಬೆಳೆಯುತ್ತಿರುವ ಮನೋಜಕುಮಾರ್ ಬೆಳೆಗೆ ಬೇಕಾದ ಸಾವಯವ ರಸಾಯನ ಮನೆಯಲ್ಲಿಯೇ ತಯಾರಿಸಿಕೊಳ್ಳುತ್ತಾರೆ. ಇದಕ್ಕೆ ಬೇಕಾದ ಗೋಮೂತ್ರ, ಸಗಣಿ, ಮಜ್ಜಿಗೆ, ಬೆಲ್ಲ ಮತ್ತಿತರ ಪದಾರ್ಥಗಳನ್ನು ಬಳಸಿ ವಿವಿಧ ಬಗೆಯ ನೈಸರ್ಗಿಕ ಗೊಬ್ಬರ ಉತ್ಪಾದಿಸಿಕೊಳ್ಳಲು ದೇಸಿ ಆಕಳುಗಳ ಸಾಕಾಣಿಕೆ ಹೆಚ್ಚು ಸಹಾಯಕವಾಗಿದೆ ಎನ್ನುತ್ತಾರೆ ಮನೋಜಕುಮಾರ.
ಆಕಳು ಸಗಣೆಯಿಂದ ಧೂಪ, ಹೋಮ, ಅಗ್ನಿಹೋತ್ರಕ್ಕೆ ಬಳಕೆ ಮಾಡುವ ಬೆರಣಿ ತಯಾರಿಸುತ್ತೇನೆ. ಆಯುರ್ವೇದ ಚಿಕಿತ್ಸೆಗೆ ಅತ್ಯಂತ ಬೇಡಿಕೆ ಇರುವ ಗೋಅರ್ಕ ತಯಾರಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ. ಒಂದು ಲೀಟರ್ ಗೋಮೂತ್ರ ₹20ಗೆ ಮಾರಾಟವಾಗುತ್ತಿದ್ದು ಈಗಾಗಲೇ 500 ಲೀಟರ್ ಗೋಮೂತ್ರ ಖರೀದಿಸಲು ಕೆಲವರು ಮುಂದೆ ಬಂದಿದ್ದಾರೆ.ಹೊಲದ ಸುತ್ತ ತೊಗರಿ ಬೆಳೆ ಮತ್ತು ಅಲ್ಲಲ್ಲಿ ಚೆಂಡು ಹೂವುಗಳನ್ನು ಬೆಳೆದಿದ್ದು, ನೆರೆ ಹೊಲದ ರಾಸಾಯನಿಕ ಮತ್ತು ಕೀಟಗಳ ಬಾಧೆಯಿಂದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಸಾವಯವ ಪದ್ಧತಿಯಿಂದ ಮಾತ್ರ ಭೂಮಿ ಉಳಿಯಲು ಸಾಧ್ಯ ಎನ್ನುತ್ತಾರೆ. ಆಸಕ್ತರು ಮನೋಜಕುಮಾರ್ ಮೊಬೈಲ್ ಸಂಖ್ಯೆ 8050285119ನ್ನು ಸಂಪರ್ಕಿಸಬಹುದು.
ತಂದೆ-ತಾಯಿ ಸಾಥ್: ತಂದೆ ಶಿವರಾಮ್ ಹಾಗೂ ತಾಯಿ ಸುಲೋಚನಾ ಅವರು ಮಗನ ನಿರ್ಧಾರವನ್ನು ಸ್ವಾಗತಿಸಿ, ಮಗನ ಕನಸಿನ ಸಾವಯವ ಕೃಷಿಯಲ್ಲಿ ಜೊತೆಯಾಗಿ ನಿಂತು ಶ್ರಮಿಸುತ್ತಿದ್ದಾರೆ. ನಮಗೂ ಮೊದಲು ಆತಂಕವಾಯಿತು. ನಂತರ ಮಗನ ನಿರ್ಧಾರ ಖುಷಿ ನೀಡಿತು. ಆತ ಕೃಷಿಯಲ್ಲಿಯೇ ಸಾಧನೆ ಮಾಡುವ ಹಂಬಲ ಹೊಂದಿದ್ದಾನೆ. ಮಗನ ಜೊತೆಗಿದ್ದು ಕೃಷಿ ಪ್ರಗತಿಯಲ್ಲಿ ಕೈಜೋಡಿಸಿದ್ದೇವೆ ಎಂದು ಮನೋಜ್ ಕುಮಾರ್ ತಂದೆ ಶಿವರಾಮ್ ಹಾಗೂ ತಾಯಿ ಸುಲೋಚನಾ ತಿಳಿಸಿದರು.