ಸಾರಾಂಶ
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುವೃತ್ತಿ ಬದುಕಿನ ನಿವೃತ್ತಿಯ ಬಳಿಕ ಶಿಕ್ಷಣ ಮುಂದುವರಿಸುವವರು ಅತ್ಯಂತ ವಿರಳ. ಆದರೆ ಮಂಗಳೂರಿನ ಮೋಹನ್ ಪೈಲೂರು ಯೋಗ ವಿಜ್ಞಾನ ವಿಷಯದಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್ ಮಾಡಿದ್ದಷ್ಟೇ ಅಲ್ಲ, ಅದರಲ್ಲಿ ಫಸ್ಟ್ ರ್‍ಯಾಂಕ್‌ನ್ನೂ ಪಡೆದು ಮಾದರಿಯಾಗಿದ್ದಾರೆ.
ಯೋಗವನ್ನು ಜೀವನದ ಭಾಗವನ್ನಾಗಿ ಮಾಡಿಕೊಂಡಿರುವ ಮೋಹನ ಪೈಲೂರು ಅವರು, ಪ್ರಸ್ತುತ ತಮ್ಮ 67ನೇ ವಯಸ್ಸಿನಲ್ಲೂ ಇತರರಿಗೆ ಯೋಗ ಶಿಕ್ಷಣ ನೀಡಲು ಮುಂದಾಗಿರುವುದು ವಿಶೇಷ.ಎಂಜಿನಿಯರಿಂಗ್‌ನಿಂದ ಯೋಗದೆಡೆಗೆ:ಮೂಲತಃ ಸುಳ್ಯದ ಚೊಕ್ಕಾಡಿಯ ಮೋಹನ್ ಪೈಲೂರು, 1978ರಲ್ಲಿ ಸುರತ್ಕಲ್ ಎನ್ಐಟಿಕೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದು ಭದ್ರಾವತಿಯಲ್ಲಿ ಉದ್ಯೋಗ ಆರಂಭಿಸಿದ್ದರು. ಸುದೀರ್ಘ ವರ್ಷಗಳ ಕಾಲ ಸೂರತ್‌ನ ಕ್ರಿಬ್ಕೊ ಕಂಪೆನಿಯಲ್ಲಿ ಕೆಲಸ ಮಾಡಿ ನಿವೃತ್ತರಾದ ಬಳಿಕ ಮಂಗಳೂರಿಗೆ ಮರಳಿದ್ದಾರೆ. ನಿವೃತ್ತಿಯ ಬಳಿಕ ಪೂರ್ಣಕಾಲಿಕ ಯೋಗ ಶಿಕ್ಷಣದೆಡೆಗೆ ಮೋಹನ್ ಪೈಲೂರು ಮನಸ್ಸು ಹೊರಳಿದೆ.
ಅಗಲಿಕೆಯ ದುಃಖ ನೀಗಿಸಿದ ಯೋಗ:ಮೋಹನ್ ಅವರ ಪತ್ನಿಗೂ ಯೋಗದಲ್ಲಿ ಆಸಕ್ತಿಯಿದ್ದು, ಯೋಗ ಕ್ಯಾಂಪ್‌ಗಳಲ್ಲಿ ಭಾಗವಹಿಸಿ ಅಭ್ಯಾಸ ಮಾಡುತ್ತಿದ್ದರು. ನಿವೃತ್ತಿ ಜೀವನವನ್ನು ಸಕ್ರಿಯವಾಗಿಸಲು ತೀರ್ಮಾನಿಸಿದ್ದ ಮೋಹನ್, ಯೋಗ ಶಿಕ್ಷಣದಲ್ಲಿ ಸರ್ಟಿಫಿಕೆಟ್ ಕೋರ್ಸ್ ಪೂರೈಸಿದರು. ಇಷ್ಟೊತ್ತಿಗೆ ಅವರ ಪತ್ನಿ 2021ರಲ್ಲಿ ಕ್ಯಾನ್ಸರ್‌ನಿಂದ ತೀರಿಕೊಂಡಾಗ ಅದರ ದುಃಖದಿಂದ ಹೊರಬರಲು ನೆರವಾಗಿದ್ದು ಕೂಡ ಅದೇ ಯೋಗ.
ಪತ್ನಿಯ ಮರಣದ ಬಳಿಕ ಯೋಗ ವಿಜ್ಞಾನದಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್‌ಗೆ ಸೇರಿದವರು ಎಲ್ಲರೂ ಹುಬ್ಬೇರಿಸುವಂತೆ ಪ್ರಥಮ ರ್‍ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಅವರ ಬದುಕಿನ ಸಾಧನೆ ಮತ್ತೊಂದು ಮಗ್ಗುಲಿಗೆ ಹೊರಳಲು ಯೋಗವನ್ನು ರಹದಾರಿ ಮಾಡಿಕೊಂಡಿದ್ದು, ಅದನ್ನೇ ಜೀವನದ ಸಂತೋಷವನ್ನಾಗಿ ಮಾರ್ಪಡಿಸಿದ್ದು ಮೋಹನ್ ಹೆಚ್ಚುಗಾರಿಕೆ.‘ಚಿಕ್ಕಂದಿನಿಂದಲೂ ಯೋಗದ ಬಗ್ಗೆ ನನಗೆ ಆಸಕ್ತಿಯಿತ್ತು. ಸೂರತ್‌ನಲ್ಲಿ ಉದ್ಯೋಗದಲ್ಲಿದ್ದಾಗ ವರ್ಷಕ್ಕೊಮ್ಮೆ ಹರಿದ್ವಾರ ಮತ್ತಿತರ ಕಡೆಗಳಿಂದ ಯೋಗ ಗುರುಗಳನ್ನು ಕರೆಸಿ ಕ್ಯಾಂಪ್ ಮಾಡಲಾಗುತ್ತಿತ್ತು. ನಿವೃತ್ತಿಯ ಬಳಿಕ ಪತ್ನಿಗೂ ಯೋಗದಲ್ಲಿ ಆಸಕ್ತಿ ಇದ್ದುದರಿಂದ ಹಲವು ಯೋಗ ಕ್ಯಾಂಪ್‌ಗಳಲ್ಲಿ ನಾನೂ ಭಾಗವಹಿಸಿ ಅಭ್ಯಾಸ ಮಾಡಿದೆ. ನಂತರ ಯೋಗವನ್ನೇ ಶಿಕ್ಷಣ ರೂಪದಲ್ಲಿ ಮುಂದುವರಿಸುವ ಇಚ್ಛೆ ಆಯಿತು’ ಎನ್ನುತ್ತಾರೆ ಮೋಹನ್ ಪೈಲೂರು.
ಮಂಗಳೂರು ವಿಶ್ವವಿದ್ಯಾನಿಲಯದ ಪಿಜಿ ಡಿಪ್ಲೊಮಾ ಕೋರ್ಸ್ ಹಾಗೂ ಪಿಜಿ ಕೋರ್ಸ್ ಅತ್ಯುತ್ತಮವಾಗಿದೆ. ಥಿಯರಿ ಮತ್ತು ಪ್ರಾಕ್ಟಿಕಲ್ಸ್ ಎರಡೂ ಬಗೆಯ ಕಲಿಕೆ ಇಲ್ಲಿ ಸಿಗುತ್ತದೆ. ಹೆಚ್ಚೆಚ್ಚು ಮಂದಿ ಈ ಶಿಕ್ಷಣ ಪಡೆಯಲು ಮುಂದಾಗಬೇಕು ಎನ್ನುತ್ತಾರವರು.ಯೋಗಾಭ್ಯಾಸ ಮಾಡುವುದು ದೈಹಿಕ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಅತ್ಯಂತ ಉತ್ತಮ. ದಿನಕ್ಕೆ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡಿದರೆ ಹಲವು ಪ್ರಯೋಜನಗಳಿವೆ. ನಿವೃತ್ತಿಯ ಬಳಿಕ ನಾನು ಪೂರ್ಣ ಪ್ರಮಾಣದಲ್ಲಿ ಯೋಗ ಶಿಕ್ಷಣ ಪಡೆಯಲು ಯೋಗದ ಮೇಲಿನ ಆಸಕ್ತಿ- ಪ್ರೀತಿಯೆ ಕಾರಣ.
- ಮೋಹನ್ ಪೈಲೂರು