ಭರತೇಶ ಸಂಸ್ಥೆಯಲ್ಲಿ ಇಂಜನಿಯರಿಂಗ್ ಕಾಲೇಜ್‌ ಪ್ರಾರಂಭ

| Published : May 24 2024, 01:01 AM IST / Updated: May 24 2024, 01:02 AM IST

ಸಾರಾಂಶ

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಇಂಜನಿಯರಿಂಗ್ ಕಾಲೇಜು ಪ್ರಾರಂಭಿಸಲಾಗುತ್ತಿದೆ ಎಂದು ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ಇಂಜನಿಯರಿಂಗ್ ಕಾಲೇಜು ಪ್ರಾರಂಭಿಸಲಾಗುತ್ತಿದೆ ಎಂದು ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1962 ರಲ್ಲಿ ಭರತೇಶ ಎಜ್ಯುಕೇಶನ ಟ್ರಸ್ಟ್‌ ಹೆಸರನಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಇಂದು ಬೆಳಗಾವಿ ನಗರ, ಹಲಗಾ ಹಾಗೂ ಬಸವನ ಕುಡಚಿಯಲ್ಲಿ 3 ಸುಸಜ್ಜಿತ ಕ್ಯಾಂಪಸ್‌ಗಳನ್ನು ಹೊಂದುವ ಮೂಲಕ 20 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತ ಬಂದಿದೆ. ಭರತೇಶ ಶಿಕ್ಷಣ ಸಂಸ್ಥೆಯು ಈಗಾಗಲೇ ಕಳೆದ 40 ವರ್ಷಗಳಿಂದ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಮೂಲಕ ಇಂಜನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.ಇದೀಗ ಭರತೇಶ ಸಂಸ್ಥೆಯು ಬಸವನ ಕುಡಚಿಯಲ್ಲಿ ಭರತೇಶ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ-ಹೊಸ ಇಂಜನಿಯರಿಂಗ್ ಕಾಲೇಜುವನ್ನು ಪ್ರಾರಂಭಿಸುತ್ತಿದೆ. ಈ ಕಾಲೇಜಿಗೆ ಅಖಿಲ ಭಾರತ ತಾಂತ್ರಿಕ ಶೀಕ್ಷಣ ಮಂಡಳಿ (AICTE) ಅನುಮೋದಿಸಿದೆ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದೊಂದಿಗೆ ಸಂಯೋಜಿತವಾಗಿದೆ ಎಂದು ಮಾಹಿತಿ ನೀಡಿದರು.ಪ್ರಸ್ತುತ ಹೊಸದಾಗಿ ಪ್ರಾರಂಭವಾಗುತ್ತಿರುವ ಇಂಜನಿಯರಿಂಗ್ ಕಾಲೇಜುನಲ್ಲಿ 4 ಶಾಖೆಗಳನ್ನು ಹೊಂದಲಾಗಿದ್ದು, ಕಂಪ್ಯೂಟರ್ ಸೈನ್ಸ್‌, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (AIML), ಮಾಹಿತಿ ವಿಜ್ಞಾನ, ಎಲೆಕ್ಟ್ರಾನಕ್‌ ಮತ್ತು ಸಂವಹನ ಹೀಗೆ ಒಟ್ಟು 360 ಸೀಟುಗಳನ್ನು ಹೊಂದಿದೆ. ಈ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಮಾಡಿಕೊಳ್ಳಲು ಅನಕೂಲವಾಗುತ್ತವೆ ಎಂದು ತಿಳಿಸಿದರು.ಸುಮಾರು 30,000 ಚದರ ಅಡಿಗಳಷ್ಟು ವಿಸ್ತಾರವಾದ ಬೆಳಗಾವಿಯ ಬಸವನ ಕುಡಚಿಯ ಭರತೇಶ ಚಂದ್ರಗಿರಿ ಕ್ಯಾಂಪಸ್‌ನಲ್ಲಿ ನೂತನವಾಗಿ ಹಾಗೂ ವಾಸ್ತುಶಿಲ್ಪದ ಹೊಸ ಕಟ್ಟಡದಲ್ಲಿ ಈ ಕಾಲೇಜನ್ನು ಪ್ರಾರಂಭಿಸಲಾಗಿದೆ ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿಗೃಹಗಳನ್ನು ಸಹ ಹೊಂದಿದೆ. ನಿರಂತರ ಸಾರಿಗೆ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ ಎಂದರು. ಮೇ.25 ರಂದು ಬೆಳಗ್ಗೆ 10.30 ಗಂಟೆಗೆ ಬಸವನ ಕುಡಚಿ ಆವರಣದಲ್ಲಿ ಭರತೇಶ ಹೋಮಿಯೋಪೆಥಿಕ್‌ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಭೇಟಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅರಿಹಂತ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮಹಾದೇವ ದೀಕ್ಷಿತ ಆಗಮಿಸಲಿದ್ದಾರೆ. ಅದರಂತೆ ಬ್ಯಾಂಕ್‌ ಆಫ್ ಇಂಡಿಯಾ ವಲಯ ಪ್ರಬಂಧಕ ವಿ.ವಿ.ಕೃಷ್ಣ ಕಿಶೋರ, ದೊಡ್ಡಣ್ಣವರ ಬ್ರದರ್ಸ್‌ ನಿರ್ದೇಶಕ ಪ್ರವೀಣ ದೊಡ್ಡಣ್ಣವರ ಮೊದಲಾದವರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಗೋಷ್ಠಿಯಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪೂರೆ, ಭೂಷಣ ಮಿರ್ಜಿ, ಆಡಳಿತ ಮಂಡಳಿಯ ಸದಸ್ಯರಾದ ಹೀರಾಚಂದ ಕಲಮನಿ, ಡಾ.ಸಾವಿತ್ರಿ ದೊಡ್ಡಣ್ಣವರ, ಅಶೋಕ ದಾನವಡೆ.ರಾಜೇಂದ್ರ ರಾಮಗೊಂಡಾ, ಶರದ ಪಾಟೀಲ, ಸಂಸ್ಥೆಯ ಸದಸ್ಯರಾದ ದೇವೇಂದ್ರ ದೇಸಾಯಿ, ಸಂಜೀವ ದೊಡ್ಡಣ್ಣವರ, ಕಾಲೇಜು ಆಡಳಿತಾಧಿಕಾರಿ ಡಾ.ಗೋಮಟೇಶ ರಾವನ್ನವರ, ಪ್ರಾಚಾರ್ಯ ಡಾ.ವೀಣಾ ಕರ್ಚಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಇಂಜನಿಯರಿಂಗ್ ಶಿಕ್ಷಣವನ್ನು ಪಡೆಯಲು ಮತ್ತು ಉತ್ತಮ ಜೀವನ ರೂಪಿಸಲು ಅರ್ಹ ವಿದ್ಯಾರ್ಥಿಗಳಿಗೆ ಅತ್ಯಂತ ಸ್ಪರ್ಧಾತ್ಮಕ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತಿದೆ. ಮ್ಯಾನೆಜಮೆಂಟ್ ಸೀಟುಗಳ ಪ್ರವೇಶಾತಿ ಈಗಾಗಲೇ ಭರದಿಂದ ಸಾಗಿವೆ. ಭರತೇಶ ಇಂಜನಿಯರಿಂಗ್ ಕಾಲೇಜು ಹಲವಾರು ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಕೈಗಾರಿಕಾ ಭೇಟಿಗಳು, ಪ್ರಾಜೆಕ್ಟ್‌ ಆಧಾರಿತ ಕಲಿಕೆ ಮತ್ತು ಕೌಶಲ್ಯ ಪ್ರಯೋಗಾಲಯಗಳನ್ನು ಹೊಂದಿದೆ. ಮಾಹಿತಿಗಾಗಿ ಮೊ.9071015777 ಸಂಪರ್ಕಿಸಬಹುದಾಗಿದೆ.

-ವಿನೋದ ದೊಡ್ಡಣ್ಣವರ,

ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ.