ಸಾರಾಂಶ
ಹಳಿಯಾಳ: ಆಧುನಿಕ ಜಗತ್ತು ಇಂದು ವಿದ್ಯುತ್ ಶಕ್ತಿಯ ಪ್ರಭಾವದಿಂದಲೇ ನಡೆಯುತ್ತಿದೆ. ವಿದ್ಯುತ್ ಇಲ್ಲದ ಜಗತ್ತು ಉಹಿಸಲು ಅಸಾಧ್ಯವಾಗಿದೆ. ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ವಿದ್ಯುತ್ ಶಕ್ತಿಯ ಸದ್ಬಳಕೆ ಮಾಡುವ ಬಹು ಮಹತ್ತರವಾದ ಸಾಮಾಜಿಕ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ ಹೇಳಿದರು.ಸೋಮವಾರ ತಾಲೂಕು ಆಡಳಿತ ಸೌಧದಲ್ಲಿ ನಡೆದ ಸಮಾರಂಭದಲ್ಲಿ ಕೆ.ಎಲ್.ಎಸ್ ಸಂಸ್ಥೆಯ ವಿಡಿಐಟಿ ಕಾಲೇಜು ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಹಾಗೂ ಬ್ಯೂರೋ ಆಫ್ ಎಫಿಶಿಎನ್ಸಿ ಸಹಯೋಗದಲ್ಲಿ ವಿದ್ಯುತ್ ಶಕ್ತಿಇಯ ಸದ್ಬಳಕೆ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡ ಕಾಲ್ನಡಗಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯುತ್ ಶಕ್ತಿಯ ಸಮರ್ಪಕ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಳಿಯಾಳದ ವಿಡಿಐಟಿ ಎಂಜಿನಿಯರಿಂಗ್ ಕಾಲೇಜು ಹಮ್ಮಿಕೊಂಡ ಜಾಗೃತಿ ಜಾಥಾ ಅಭಿಯಾನವು ಶ್ಲಾಘನೀಯವಾಗಿದೆ ಎಂದರು.ಹಳಿಯಾಳ ಹೆಸ್ಕಾಂ ಇಲಾಖೆಯ ಎಇಇ ರವೀಂದ್ರ ಮೆಟಗುಡ್ ಮಾತನಾಡಿ, ವಿದ್ಯುತನ್ನು ಅನಗತ್ಯವಾಗಿ ಪೋಲು ಮಾಡದೇ ಅಗತ್ಯಕ್ಕೆ ತಕ್ಕಷ್ಟೇ ಬಳಸಿ ಶಕ್ತಿ ಸಂರಕ್ಷಣೆಗೆ ನೆರವಾಗುವಂತೆ ಸಲಹೆ ನೀಡಿದರು.
ಹೆಚ್ಚಿನ ಸ್ಟಾರ್ ರೇಟಿಂಗ್ ಇರುವ ಎಲೆಕ್ಟ್ರಿಕಲ್ ಉಪಕರಣಗಳು ಹಾಗೂ ವಿದ್ಯುತ್ ಮಿತವ್ಯಯಿ ಎಲ್.ಇಡಿ ಬಲ್ಬ್ ಬಳಸಬೇಕೆಂದು ಕರೆ ನೀಡಿದರು.ಎಂಜಿನಿಯರಿಂಗ್ ಕಾಲೇಜಿನ ಡೀನ್ ಅಡ್ಮಿನಿಸ್ಟ್ರೇಷನ್ ಪ್ರೊ. ಮಂಜುನಾಥ ಉಪಸ್ಥಿತರಿದ್ದರು.
ಎಲೆಕ್ಟ್ರಿಕಲ್ ವಿಭಾಗದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿದರು. ಪಟ್ಟಣದ ಶಿವಾಜಿ ವೃತ್ತದಿಂದ ಆರಂಭಗೊಂಡ ಕಾಲ್ನಡಿಗೆಯ ಜಾಥಾ ಅರ್ಬನ್ ಬ್ಯಾಂಕ್ ವೃತ್ತದಲ್ಲಿ ಮುಕ್ತಾಯಗೊಂಡಿತು.