ಸಾರಾಂಶ
ಹುಬ್ಬಳ್ಳಿ: ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಸದೃಢ ರಾಷ್ಟ್ರ ಕಟ್ಟುವಲ್ಲಿ ನಾವೆಲ್ಲರೂ ವಿಫಲರಾಗುತ್ತಿದ್ದೇವೆ. ಹಲವೆಡೆ ಕಟ್ಟಿರುವ ಕಟ್ಟಡ, ಪ್ರತಿಮೆಗಳು ನಮ್ಮ ಕಣ್ಣಮುಂದೆಯೇ ನೆಲಕ್ಕುರುಳಿವೆ. ಎಂಜಿನಿಯರ್‌ಗಳು ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಮೂಲಕ ಸದೃಢರಾಷ್ಟ್ರ ಕಟ್ಟುವಲ್ಲಿ ಕೈಜೋಡಿಸುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಕರೆ ನೀಡಿದರು.
ಇಲ್ಲಿನ ಬಿವಿಬಿ ಕಾಲೇಜಿನ ಕೆಎಲ್‌ಇ ಟೆಕ್ ಸಭಾಂಗಣದಲ್ಲಿ ಹು-ಧಾ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಸೋಶಿಯೇಶನ್ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಎಂಜಿನಿಯರ್ಸ್ ದಿನಾಚರಣೆ ಹಾಗೂ ಕರ್ನಾಟಕ ವೃತ್ತಿಪರ ಎಂಜಿನಿಯರ್‌ಗಳ ವಿಧೇಯಕ-2024 ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಇಂದು ಸರ್ಕಾರದ, ಅಧಿಕಾರಿ ವರ್ಗದವರಿಂದ ಪರಿಸ್ಥಿತಿ ಹದಗೆಟ್ಟಿರಬಹುದು. ಆದರೆ, ಎಂಜಿನಿಯರ್‌ಗಳು ತಮ್ಮ ಜವಾಬ್ದಾರಿಗಳನ್ನು ಅರಿತು ದೇಶ ಕಟ್ಟಿ ಮುನ್ನೆಡಸಬೇಕು. ಪರಿಸ್ಥಿತಿ ಹದಗೆಟ್ಟಿರುವುದರಿಂದ ಇಂದು ಸರ್ಕಾರದ ಒಂದೇ ಒಂದು ಸುಸಜ್ಜಿತ ಸಭಾಂಗಣ ಕಾಣಲು ಸಿಗದಂತಹ ಪರಿಸ್ಥಿತಿ ಉದ್ಭವವಾಗಿದೆ. ಇದಕ್ಕೆ ರಾಜಕೀಯ ವ್ಯಕ್ತಿಗಳು, ಗುತ್ತಿಗೆದಾರರು, ಶಾಸನ ಮಾಡುವವರು ತಮ್ಮ ಅಗತ್ಯತೆಗಳನ್ನು ನಿಷ್ಕ್ರಿಯಗೊಳಿಸಬೇಕು ಎಂದರು.
ಸರ್ ಎಂ. ವಿಶ್ವೇಶ್ವರಯ್ಯ ಅವರ ಬದುಕು ನಮಗೆಲ್ಲ ಪ್ರೇರಣೆಯಾಗಬೇಕಿದೆ. ಬಸವಣ್ಣವನರ ಕಾಯಕವೇ ಕೈಲಾಸ ಎಂಬ ತತ್ವದಂತೆ ವಿಶ್ವೇಶ್ವರಯ್ಯ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದವರು ಒಬ್ಬ ಅಭಿಯಂತರ ಚಿಂತೆ ಮಾಡದೇ ಚಿಂತನೆ ಮಾಡಿದರೆ ಏನೆಲ್ಲ ಸಾಧನೆ ಮಾಡಬಹುದು ಎಂಬುದನ್ನು ಸರ್ ಎಂ. ವಿಶ್ವೇಶ್ವರಯ್ಯ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.ರೈತರ ಏಳ್ಗೆಯ ಬಗ್ಗೆ ಚಿಂತನೆ ಮಾಡಿದ ಸರ್ ಎಂ. ವಿಶ್ವೇಶ್ವರಯ್ಯ ಅವರು ಕೃಷ್ಣರಾಜ ಸಾಗರ ನಿರ್ಮಿಸಿದರು. ಶರಾವತಿ ನದಿಯಲ್ಲಿ ವಿದ್ಯುಚ್ಛಕ್ತಿ ಉತ್ಪಾದಿಸಿ ಎಂಜಿನಿಯರ್‌ಗಳಿಗೆ ಮಾದರಿಯಾಗಿದ್ದಾರೆ. ಅವರ ಆಲೋಚನೆ ಪ್ರಕ್ರಿಯೆಯಿಂದ ಹಲವು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದಾರೆ. ದೇಶವನ್ನು ಅದ್ಭುತವಾಗಿ ಕಟ್ಟಬೇಕು ಎಂಬ ಧ್ವನಿ ಎಂಜಿನಿಯರ್‌ಗಳಿಂದ ಬಂದಾಗ ರಾಷ್ಟ್ರ ಕಲ್ಯಾಣ ಸಾಧ್ಯ. ಕರ್ನಾಟಕ ವೃತ್ತಿಪರ ಎಂಜಿನಿಯರ್‌ಗಳ ವಿಧೇಯಕ ಜಾರಿಯಿಂದ ದೊಡ್ಡ ಬದಲಾವಣೆಯಾಗುವಂತಾಗಲಿ ಎಂದು ಕರೆ ನೀಡಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ದೇಶ ನಿರ್ಮಾಣದಲ್ಲಿ ರೈತರ ಪಾತ್ರ ಎಷ್ಟು ಮುಖ್ಯವೋ ಎಂಜಿನಿಯರ್‌ಗಳ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಎಂಜಿನಿಯರ್‌ಗಳ ತರಬೇತಿಗಾಗಿ ಬಜೆಟ್‌ನಲ್ಲಿ ಶೇ. 1ರಷ್ಟು ಹಣ ಮೀಸಲಿಡಲಾಗಿದೆ. ಒಂದೇ ತಿಂಗಳಿನಲ್ಲಿ ವೃತ್ತಿಪರ ಎಂಜಿನಿಯರ್‌ಗಳ ವಿಧೇಯಕ ಜಾರಿಯಾಗುತ್ತಿದೆ. ಯಾವುದೇ ವಿಧೇಯಕ ಇಷ್ಟೊಂದು ತ್ವರಿತಗತಿಯಲ್ಲಿ ಜಾರಿಯಾಗಿಲ್ಲ. ಈ ವಿಧೇಯಕ ಜಾರಿಯಿಂದಾಗಿ ಎಂಜಿನಿಯರ್‌ಗಳ ಜವಾಬ್ದಾರಿ ಹೆಚ್ಚಳವಾಗುವುದರೊಂದಿಗೆ ಭದ್ರತೆ ದೊರೆಯುತ್ತದೆ. ಈ ಕಾನೂನುನಿಂದ ನಿಮಗೆ ಶಕ್ತಿ ದೊರೆಯಲಿ ಎಂದರು.ಇದೇ ವೇಳೆ ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನಿಯರ್ಸ್ ವಿಧೇಯಕ-2024 ಜಾಲತಾಣ ಹಾಗೂ ಮಾಹಿತಿ ಪುಸ್ತಕವನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಅಶೋಕ ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು.
ಡಾ. ಬಸವರಾಜ ಅನಾಮಿ, ಸುರೇಶ ಕಿರೇಸೂರ, ಶ್ರೀಕಾಂತ ಚನ್ನಾಳ, ದೇವಕಿ ಯೋಗಾನಂದ, ವಸಂತ ಪಾಲನಕರ, ಸುನೀಲ ಬಾಗೇವಾಡಿ, ಸಂತೋಷ ಅಂಚಟಗೇರಿ, ಎಂ.ಎಂ. ಜಾಲವಾದಿ, ಪ್ರಶಾಂತ ಲೋಕಾಪುರ ಸೇರಿದಂತೆ ಹಲವರಿದ್ದರು.