ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಹಾಗೂ ಎಸಿಸಿಇ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಧಾರವಾಡ: ಅಭಿಯಂತರರು ಕೇವಲ ಕಟ್ಟಡ, ರಸ್ತೆ ಹಾಗೂ ಸೇತುವೆಗಳನ್ನು ನಿರ್ಮಿಸುವುದಕ್ಕೆ ಸೀಮಿತವಾಗದೆ, ಸಮಾಜದ ಅಗತ್ಯಗಳನ್ನು ಅರಿತು ಗುಣಮಟ್ಟದ ಹಾಗೂ ಶಾಶ್ವತ ಅಭಿವೃದ್ಧಿಗೆ ಹೊಸ ದಿಕ್ಕು ನೀಡಬೇಕು ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದರು.

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಎಸಿಸಿಇ) ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ 166ನೇ ಜನ್ಮದಿನದ ಅಂಗವಾಗಿ ಅಭಿಯಂತರರ ದಿನಾಚರಣೆಯಲ್ಲಿ ಅವರು ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯನವರು ತಮ್ಮ ತಾಂತ್ರಿಕ ಜ್ಞಾನ, ಶಿಸ್ತು, ಪ್ರಾಮಾಣಿಕತೆ ಹಾಗೂ ದೂರದೃಷ್ಟಿಯ ಮೂಲಕ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾಧನೆಗಳು ಇಂದಿನ ಪೀಳಿಗೆಯ ಅಭಿಯಂತರರಿಗೆ ಸ್ಫೂರ್ತಿಯಾಗಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಜನಸಾಮಾನ್ಯರಿಗೆ ಅನುಕೂಲವಾಗುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಅಭಿಯಂತರರ ಪ್ರಮುಖ ಜವಾಬ್ದಾರಿ ಎಂದರು.

ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಹಾಗೂ ಎಸಿಸಿಇ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಅಭಿಯಂತರರ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಡೊಳ್ಳುಕುಣಿತ ಪ್ರದರ್ಶನ ಇತ್ತು.

ಸಂಘದ ಅಧ್ಯಕ್ಷ ಸುನೀಲ ಬಾಗೇವಾಡಿ ಅಧ್ಯಕ್ಷತೆ ವಹಿಸಿ, ಅಭಿವೃದ್ಧಿ ಕಾರ್ಯಗಳಲ್ಲಿ ಗುಣಮಟ್ಟ, ಪಾರದರ್ಶಕತೆ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಧಾರವಾಡ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಅಭಿಯಂತರರ ವೃತ್ತಿಪರ ಜ್ಞಾನ ಮತ್ತು ಅನುಭವವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಹೇಳಿದರು.

ಉಪಾಧ್ಯಕ್ಷ ಅರುಣಕುಮಾರ ಶೀಲವಂತ, ಕಾರ್ಯದರ್ಶಿ ಸಿದ್ದನಗೌಡ ಪಾಟೀಲ, ಖಜಾಂಚಿ ಕಬೀರ ನದಾಫ, ಕೃಷ್ಣಾ ಯಲಿಗಾರ, ಸುಮೀತ ಸುಣಗಾರ, ರಾಕೇಶ ಪಾಟೀಲ, ರಾಜು ಇಟಗಿ, ಮಹೇಶ ಮಠದ, ಶ್ರೀಕಾಂತ ಗಾಯಕವಾಡ, ಅಲ್ತಾಪ್ ಅಲಿ ಹತ್ತಿಮತ್ತೂರ, ಸಂಜಯ ಕಬ್ಬೂರ, ವಿಜಯೇಂದ್ರಗೌಡ ಪಾಟೀಲ, ಪವನಕುಮಾರ ಬೆಟಗೇರಿ, ರಿಯಾಜ್ ಕರಿಕಟ್ಟಿ ಹಾಗೂ ಎಸಿಸಿಇ ಪದಾಧಿಕಾರಿಗಳಿದ್ದರು.