ಸಾರಾಂಶ
ಕನ್ನಡಪ್ರಭ ವಾರ್ತೆ ಕಡೂರು
ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಸರ್ಕಾರವು ಕಳೆದ ವರ್ಷದಿಂದ ದ್ವಿಭಾಷಾ ಶಾಲೆಗಳನ್ನು ತೆರೆಯುವ ಮೂಲಕ ಇಂಗ್ಲೀಷ್ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್ ಆನಂದ್ ಹೇಳಿದರು.ಪಟ್ಟಣದ ಗಣಪತಿ ಪೆಂಡಾಲಿನ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭವಿಷ್ಯ ರೂಪಿಸುವ ಶಿಕ್ಷಕರ ದಿನಾಚರಣೆಗೆ ಅವರ ಮೇಲಿನ ಗೌರವದಿಂದ ಭಾಗವಹಿಸುತಿದ್ದೇನೆ. ಭಾರತದ ಸಂಸ್ಕೃತಿಯಲ್ಲಿ ಶಿಕ್ಷಕರನ್ನು ದೇವರಿಗೆ ಹೋಲಿಸಿ ಗೌರವಿಸುತ್ತೇವೆ. ದೇಶದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ರಾಧಾಕೃಷ್ಣನ್‌ರವರು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಭಲಿಷ್ಟ ಭಾರತ ದೇಶದ ಅಭಿವೃದ್ದಿಗೆ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ನಾಸಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭಾರತವು ಅಭಿವೃದ್ದಿಯಾಗಲು ಶಿಕ್ಷಕರ ಪಾತ್ರ ಬಹು ಮುಖ್ಯ ಎಂದರು.ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತೀ ಹಳ್ಳಿಗಳಲ್ಲಿ ಶಾಲೆ ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರಕಾರವು ಕ್ರಮಕೈಗೊಂಡವು. ಇಂದು ಸರಕಾರಿ ಶಾಲೆಗಳಲ್ಲಿ ಸವಲತ್ತುಗಳು ಇದ್ದರೂ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತಿದ್ವೇವೆ ಎಂದರು.
ಕಡೂರು ಶೈಕ್ಷಣಿಕ ವಲಯದಲ್ಲಿ 14518 ಮಕ್ಕಳು ಪ್ರಾಥಮಿಕ ಶಾಲೆಗಳಲ್ಲಿ ಮತ್ತು 6654 ಹೈಸ್ಕೂಲಿನಲ್ಲಿ ಓದುತಿದ್ದಾರೆ. ಶಿಕ್ಷಣಕ್ಕಾಗಿ ಸರ್ಕಾರದಿಂದ ಸಾಕಷ್ಟು ಹಣ ನೀಡುತಿದ್ದರೂ ಕೂಡ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ. ರಾಜ್ಯದಲ್ಲಿ ಹಿಂದಿನ ಕಳೆದ ವರ್ಷ ದ್ವಿಭಾಷಾ ಶಾಲೆಗಳನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.ಕ್ಷೇತ್ರದ ಒಂದು ಪ್ರಾಥಮಿಕ ಶಾಲೆಯಲ್ಲಿರುವ 240 ಮಕ್ಕಳಲ್ಲಿ 114 ಮಕ್ಕಳಿಗೆ ಮಾತ್ರ ಕನ್ನಡ ಬರುತಿದ್ದು ಎಲ್ಲವನ್ನು ಕಲಿಯದಿರುವುದು ಕಂಡು ಬಂದಿದೆ. ಮುಚ್ಚಿರುವ 32 ಶಾಲೆಗಳನ್ನು ತೆರೆವ ನಿಟ್ಟಲ್ಲಿ ಕ್ರಮ ವಹಿಸೋಣ, 7ನೇ ವೇತನ ಆಯೋಗದ ವರದಿಯನ್ನುಕಾಂಗ್ರೆಸ್ ಸರ್ಕಾರವು ನೌಕರರು, ಶಿಕ್ಷಕರಿಗಾಗಿ ಜಾರಿಗೊಳಿಸಿದೆ. ಕೆಲ ಶಾಲೆಗಳಲ್ಲಿ ಶೇಕಡ ವಾರು ಫಲಿತಾಂಶವನ್ನು ತರಲು ಶಿಕ್ಷಕರು ಸೂಕ್ತ ಕ್ರಮ ಕೈಗೊಂಡು ಉತ್ತಮ ಪ್ರಜೆಗಳನ್ನು ರೂಪಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಶಿಕ್ಷಕರ ದಿನಾಚರಣೆಯನ್ನು ಉಧ್ಘಾಟಿಸಿದ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಎಲ್ಲ ಇಲಾಖೆಗಳಿಗಿಂತ ಶಿಕ್ಷಣ ಇಲಾಖೆಗೆ ವಿಶೇಷವಾದ ಗೌರವವಿದೆ. ವಿದ್ಯೆ ಕಲಿಸಿದ ಶಾಲೆ ಮತ್ತುಶಿಕ್ಷಕರನ್ನು ಗೌರವಿಸಬೇಕು. ಡಾ.ಸರ್ವಪಲ್ಲಿ ರಾಧಾ ಕೃಷ್ಣನ್ ರವರು ಶಿಕ್ಷಕರಾಗಿ ಕೈಗೊಂಡ ಕ್ರಾಂತಿಕಾರಕ ಕ್ರಮಗಳಿಂದ ಉನ್ನತ ಸ್ಥಾನಕ್ಕೆ ಏರಿದರು. ಅಂತಹ ಮಹಾನ್ ನಾಯಕನ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಅಲ್ಲದೆ ಶಾಲೆಗಳನ್ನು ಮುಚ್ಚದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಆದರೆ ಖಾಸಗಿ ಶಾಲೆಗಳು ಆರಂಭವಾಗಲು ಯಾರು ಕಾರಣ ಎಂದು ತಿಳಿದು ಶಾಸಕರು ಸರಕಾರದ ಮಟ್ಟದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿ, ಕೆ.ವಿ ಕಾಲೋನಿಯ ಸರ್ಕಾರಿ ಶಾಲೆಯನ್ನು ಪುರಸಭೆಗೆ ದತ್ತು ತೆಗೆದುಕೊಂಡು ನಡೆಸಲಾಗುತ್ತಿದೆ ಎಂದರು.ತಹಸೀಲ್ದಾರ್ ಸಿ. ಆರ್.ಪೂರ್ಣಿಮಾ ಮಾತನಾಡಿ, ಶಿಕ್ಷಕರು ಮೊದಲು ಕಲಿತು ನಂತರ ಮಕ್ಕಳಿಗೆ ಕಲಿಸಿ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಗುರುಗಳು. ನಾನು ಕೂಡ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ, ಎಲ್ಲ ಕ್ಷೇತ್ರಗಳಲ್ಲೂ ಶಿಕ್ಷಕರು ಸಹಕಾರದ ಕೆಲಸ ಮಾಡುತ್ತಾರೆ. ಮೌಲ್ಯಯುತ ಶಿಕ್ಷಣ ಬೇಕಿದೆ ಇದಕ್ಕೆ ಶಿಕ್ಷಕರು ಕಂಕಣಬದ್ದರಾಗಬೇಕು ಎಂದರು.
ತಾಪಂ ಇಒ ಸಿ.ಆರ್. ಪ್ರವೀಣ್ ಮಾತನಾಡಿ, ನಾನು ಕೂಡ ಸರಕಾರಿ ಶಾಲೆೆಯಲ್ಲಿ ಕಲಿತಿದ್ಗು, ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ಶಿಕ್ಷಕರಿದ್ದಾರೆ. ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಿಗೆ ಬರುವ ಮಕ್ಕಳಿಗೆ ಪ್ರೀತಿ ತೋರಿಸಿ ಕಲಿಸಬೇಕು ಎಂದರು.ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕ ಯಶ್ವಂತ್, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಕಡೂರು ಬಿಇಒ ತಿಮ್ಮಯ್ಯ, ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್, ವೈಬಿ. ಮಂಜುನಾಥ್, ತಿಮ್ಮಯ್ಯ, ಧನಪಾಲನಾಯ್ಕ,ದೇವರಾಜ್ ಪ್ರೇಂ ಕುಮಾರ್, ಸೇರಿದಂತೆ ಮತ್ತಿತರು ಇದ್ದರು.