ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಲ್ಲಿ ಉದ್ಯೋಗ ಕೌಶಲ್ಯಗಳನ್ನು ವೃದ್ಧಿಸಲು ಬ್ರಿಟೀಷ್ ಕೌನ್ಸಿಲ್ ಮತ್ತು ಮೈಕ್ರೋಸಾಫ್ಟ್ ಸಹಯೋಗದಲ್ಲಿ ರೂಪಿಸಿರುವ ‘ಇಂಗ್ಲಿಷ್ ಸ್ಕಿಲ್ ಫಾರ್ ಯೂತ್’ ಕಾರ್ಯಕ್ರಮವನ್ನು ರಾಜ್ಯದ ಇನ್ನೂ 60 ಪದವಿ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಿಗೆ ವಿಸ್ತರಿಸಲು ಉನ್ನತ ಶಿಕ್ಷಣ ಇಲಾಖೆ ಒಪ್ಪಂದ ಮಾಡಿಕೊಂಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಲ್ಲಿ ಉದ್ಯೋಗ ಕೌಶಲ್ಯಗಳನ್ನು ವೃದ್ಧಿಸಲು ಬ್ರಿಟೀಷ್ ಕೌನ್ಸಿಲ್ ಮತ್ತು ಮೈಕ್ರೋಸಾಫ್ಟ್ ಸಹಯೋಗದಲ್ಲಿ ರೂಪಿಸಿರುವ ‘ಇಂಗ್ಲಿಷ್ ಸ್ಕಿಲ್ ಫಾರ್ ಯೂತ್’ ಕಾರ್ಯಕ್ರಮವನ್ನು ರಾಜ್ಯದ ಇನ್ನೂ 60 ಪದವಿ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಿಗೆ ವಿಸ್ತರಿಸಲು ಉನ್ನತ ಶಿಕ್ಷಣ ಇಲಾಖೆ ಒಪ್ಪಂದ ಮಾಡಿಕೊಂಡಿದೆ.ನಗರದ ಆರ್‌ಸಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಉಭಯ ಸಂಸ್ಥೆಗಳ ಅಧಿಕಾರಿಗಳು ಈ ಒಪ್ಪಂದಕ್ಕೆ ಸಹಿ ಹಾಕಿದರು.
ಬಳಿಕ ಮಾತನಾಡಿದ ಸಚಿವರು, ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ನೈಪುಣ್ಯತೆ ಪ್ರಮುಖವಾದ ಒಂದು ಕೌಶಲ್ಯ. ಆದರೆ, ನಮ್ಮ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಸಂವಹಿಸುವ ಕೌಶಲ್ಯ ಇಲ್ಲದಿರುವುದು ಉತ್ತಮ ಉದ್ಯೋಗಾವಕಾಶ ಪಡೆಯುವುದು ಸವಾಲಾಗಿದೆ. ಇದನ್ನು ಮನಗಂಡು ಬ್ರಿಟಿಷ್ ಕೌನ್ಸಿಲ್ ಮತ್ತು ಮೈಕ್ರೋಸಾಫ್ಟ್ ಸಹಯೋಗದಲ್ಲಿ ಸರ್ಕಾರಿ ಕಾಲೇಜು ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಕೆಗೆ ಕಾರ್ಯಕ್ರಮ ರೂಪಿಸಿ ಈಗಾಗಲೇ 15 ಎಂಜಿನಿಯರಿಂಗ್ ಕಾಲೇಜು ಮಕ್ಕಳಿಗೆ ಪರಿಚಯಿಸಲಾಗಿತ್ತು. ಇದೀಗ ಈ ಕಾರ್ಯಕ್ರಮವನ್ನು 31 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 29 ಪಾಲಿಟೆಕ್ನಿಕ್ ಕಾಲೇಜುಗಳ ಮಕ್ಕಳಿಗೂ ವಿಸ್ತರಿಸಲಾಗುತ್ತಿದೆ ಎಂದರು.ಇಂಗ್ಲಿಷ್ ಭಾಷೆ, ಸಂವಹನ ಮತ್ತು ಉದ್ಯೋಗ ಅರ್ಹತಾ ಕೌಶಲಗಳನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಮತ್ತಷ್ಟು ಕಾಲೇಜುಗಳಿಗೆ ವಿಸ್ತರಿಸುವ ಉದ್ದೇಶವಿದೆ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳು ಹಿಂಜರಿಕೆ ಪಡದೆ ತಮ್ಮ ಗುರುಗಳು, ಸ್ನೇಹಿತರೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಪ್ರಯತ್ನ, ಅಭ್ಯಾಸ ಪಡದೆ ಯಾವುದೇ ಬರುವುದಿಲ್ಲ. ಪ್ರಾಧ್ಯಾಪಕರು ಕೂಡ ವಿದ್ಯಾರ್ಥಿಗಳೊಂದಿಗೆ ಒಂದಷ್ಟು ಸಮಯ ಇಂಗ್ಲಿಷ್‌ನಲ್ಲಿ ಮಾತನಾಡುವ, ಮಾತನಾಡಿಸುವ ಪ್ರವೃತ್ತಿ ಆರಂಭಿಸಬೇಕು. ಆಗ ಸಹಜವಾಗಿ ಇಂಗ್ಲಿಷ್ ಮಾತನಾಡುವ ಹವ್ಯಾಸ ಬೆಳೆಯುತ್ತದೆ ಎಂದರು. ಕಾರ್ಯಕ್ರಮದಲ್ಲಿ ಬ್ರಿಟಿಷ್ ಕೌನ್ಸಿಲ್ ದಕ್ಷಿಣ ಭಾರತ ನಿರ್ದೇಶಕಿ ಜನಕ ಪುಷ್ಪನಾಥನ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪುಷ್ಪಾ ಗೋಯೆಲ್ ಚೌದರಿ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಪ್ರೊ. ಶೋಭಾ ಜಿ., ಇಲಾಖೆ ಆಯುಕ್ತೆ ಎನ್. ಮಂಜುಶ್ರೀ, ಬ್ರಿಟಿಷ್ ಕೌನ್ಸಿಲ್‌ನ ಚಂದ್ರು ಅಯ್ಯರ್ ಉಪಸ್ಥಿತರಿದ್ದರು.