ಸಾರಾಂಶ
ಕಳೆದ ಒಂದು ತಿಂಗಳಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೂಸ್ಟರ್ ತರಗತಿಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ವೃದ್ಧಿಸಿವೆ.
ಹೂವಿನಹಡಗಲಿ: ಕಳೆದ ಒಂದು ತಿಂಗಳಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೂಸ್ಟರ್ ತರಗತಿಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ವೃದ್ಧಿಸಿವೆ ಎಂದು ಪ್ರಾಚಾರ್ಯ ಬಿ. ಸಣ್ಣನೀಲಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಹೊಳಲು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೊಳಲು, ಮಾಗಳ ಮತ್ತು ಹಿರೇಹಡಗಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಇಂಗ್ಲಿಷ್ ಪರೀಕ್ಷಾ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರತಿ ವರ್ಷದಂತೆ ಈ ವರ್ಷವೂ ಮೂರೂ ಕಾಲೇಜಿನಲ್ಲಿ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ವಾರ್ಷಿಕ ಪರೀಕ್ಷೆಗೆ ತಯಾರಾಗಲು ಈ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿವೆ ಎಂದರು.
ಕಲಾ ವಿದ್ಯಾರ್ಥಿಗಳಿಗೆ ಕಷ್ಟ ಎನಿಸುವ ಇಂಗ್ಲಿಷ್ ವಿಷಯವನ್ನು ಪರೀಕ್ಷಾ ದೃಷ್ಟಿಯಿಂದ ಸುಲಭಗೊಳಿಸುವ, ಈ ಕಾರ್ಯಾಗಾರಗಳ ಸದುಪಯೋಗ ಆಗಬೇಕು. ದ್ವಿತೀಯ ಪಿಯುಸಿ ವಿದ್ಯಾರ್ಥಿ ಜೀವನದ ಅತಿ ಮುಖ್ಯ ಹಂತವಾಗಿದ್ದು, ಮುಂಬರುವ ಪರೀಕ್ಷೆಗೆ ಉತ್ತಮ ತಯಾರಿ ನಡೆಸಿ ಒಳ್ಳೆಯ ಫಲಿತಾಂಶ ಪಡೆದುಕೊಳ್ಳಿ ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿ ಹೂವಿನಹಡಗಲಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ. ಕೊಟ್ರಗೌಡ ಹಾಗೂ ಮೋರಗೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಅಜರುದ್ದೀನ್ ಮೂಲಿಮನಿ ಬದಲಾದ ಹೊಸ ಪರೀಕ್ಷಾ ಪದ್ಧತಿ ಹಾಗೂ ಪ್ರಶ್ನೆಪತ್ರಿಕೆ ಮಾದರಿಯ ಪ್ರಕಾರ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯದಲ್ಲಿ ಉತ್ತಮ ಅಂಕ ಪಡೆಯುವ ಬಗ್ಗೆ ಮಾರ್ಗದರ್ಶನ ಮಾಡಿದರು.
ಪ್ರಾಚಾರ್ಯರಾದ ಬಿ. ಈಶ್ವರಪ್ಪ, ಪ್ರಕಾಶ್ ಕಲ್ಲನಗೌಡ್ರ, ಉಪನ್ಯಾಸಕರಾದ ಎಂ. ರೇವಣಸಿದ್ಧಪ್ಪ, ಪಿ.ಕೆ. ಮಧು ನಾಯ್ಕ, ಪರಶುರಾಮ ನಾಗೋಜಿ, ಸುಮಾ, ತಾರಾಸಿಂಗ್ ಉಪಸ್ಥಿತರಿದ್ದರು. ಹೊಳಲು, ಹಿರೇಹಡಗಲಿ ಹಾಗೂ ಮಾಗಳ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.