ಕನ್ನಡಪ್ರಭ ವಾರ್ತೆ ಪಾವಗಡ

ಶ್ರಾವಣ ಮಾಸ ಆಗಮನದ ಹಿನ್ನೆಲೆಯಲ್ಲಿ ನಗರದ ಶ್ರೀ ಕ್ಷೇತ್ರ ಶನಿಮಹಾತ್ಮ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ಭಕ್ತರಿಗೆ ಅಗತ್ಯ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವಂತೆ ಶಾಸಕ,ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ತಾಲೂಕಿನ ಅಧಿಕಾರಿಗಳು ಮತ್ತು ಎಸ್‌ಎಸ್‌ಕೆ ಸಂಘದ ಆಡಳಿತ ಮಂಡಳಿಗೆ ಸಲಹೆ ನೀಡಿದರು. 13ರಿಂದ ಶ್ರಾವಣಮಾಸ ಪ್ರಾರಂಭವಾಗುವ ಹಿನ್ನಲೆಯಲ್ಲಿ ಶುಕ್ರವಾರ ಶ್ರೀ ಶನಿಮಹಾತ್ಮಸ್ವಾಮಿ ದೇವಸ್ಥಾನ ಸಂಘದ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿ ಹಾಗೂ ಎಸ್‌ಎಸ್‌ಕೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.ಈ ವೇಳೆ ಮಾತನಾಡಿದ ಅವರು, ರಾಜ್ಯ,ಆಂಧ್ರ, ತಮಿಳುನಾಡು ಹಾಗೂ ಇತರೆ ರಾಜ್ಯದ ಮೂಲೆಮೂಲೆಯ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಲಿದ್ದಾರೆ.10ದಿನಗಳ ಕಾಲ ಜಾತ್ರಾಮಹೋತ್ಸವ ಹಾಗೂ ಶ್ರೀ ಶನಿಮಹಾತ್ಮ ಸ್ವಾಮಿ ಹಾಗೂ ಶ್ರೀ ಜೇಷ್ಟದೇವಿ ಹಾಗೂ ಶ್ರೀ ಶೀತಲಾಂಭದೇವಿ ಅಮ್ಮನವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷವು ಸಹ ಲಕ್ಷಾಂತರ ಸಂಖ್ಯೆಯ ಭಕ್ತರು ಅಗಮಿಸಿ ದೇವರ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸರದಿ ಸಾಲಿನಲ್ಲಿ ತೆರಳಲು ಬ್ಯಾರಿಕೇಡ್‌ಗಳ ನಿರ್ಮಾಣ, ಕುಡಿಯುವ ನೀರು, ಸ್ವಚ್ಛತೆ, ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಸಂಚಾರ ನಿಯಂತ್ರಣ, ಪೊಲೀಸ್‌ ಭದ್ರತೆ, ಆರೋಗ್ಯ ಸೇವೆ ಸೇರಿದಂತೆ ಇತರೆ ಅಗತ್ಯ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ,ಸೂಚನೆ ನೀಡಿದರು.

ಇದೇ ‍ವೇಳೆ ತಹಸೀಲ್ದಾರ್ ವೈ ರವಿ, ತಾಪಂ ಇಒ ಮಧುಸೂದನ್, ಸಿಪಿಐ ಸುರೇಶ್‌ಗೌಡ, ಪುರಸಭಾ ಮುಖ್ಯಾಧಿಕಾರಿ ಜಾಫರ್ ಷರೀಫ್, ಎಸ್‌ಎಸ್‌ಕೆ ಸಂಘದ ಅಧ್ಯಕ್ಷರಾದ ಜಿ.ಅನಿಲ್ ಕುಮಾರ್, ಸುದೇಶ್ ಕುಮಾರ್, ಆನಂದ್ ರಾವ್, ತೆಂಗಿನಕಾಯಿ ರವಿ, ವೆಂಕಟರಮಣಪ್ಪ,ವಿಜಯ್ ಕುಮಾರ್, ಬಾಲಸುಬ್ರಮಣ್ಯಂ, ಷಾಬಾಬು, ಅಮರ್‌ ಸೇರಿ ಎಸ್‌ಎಸ್‌ಕೆ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. .