ಸಾರಾಂಶ
ದೇಶಿನಾಟಿ ಗೋತಳಿಗಳ ಸಂಖ್ಯೆ ದಿನೇದಿನೇ ಕ್ಷೀಣಿಸುತ್ತಿದೆ. ರೈತರು ವಿದೇಶಿ ಸೀಮೆ ಹಸುಗಳು ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಈ ಹಸುಗಳು ಮನುಷ್ಯನ ದೇಹಕ್ಕೆ ಹಾನಿಕಾರಕವಾಗಿದೆ. ಈ ಹಸುವಿನ 2 ಲೀಟರ್ ಹಾಲನ್ನು ಉಪಯೋಗಿಸುವ ಬದಲು ನಾಟಿ ತಳಿ ಹಸುವಿನ 200 ಗ್ರಾಂ ಹಾಲನ್ನು ಉಪಯೋಗಿಸಿದರೆ ಪೌಷ್ಟಿಕಾಂಶ ಹೆಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ ದೇಶಿಯ ಗೋ ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಭಾರತೀಯ ದೇಶಿ ಗೋತಳಿಗಳ ಉತ್ಪನ್ನಗಳಲ್ಲಿ ಆರೋಗ್ಯ ವೃದ್ಧಿಸುವ ಗುಣಗಳು ಹೆಚ್ಚಾಗಿರುವುದರಿಂದ ದೇಶಿ ಗೋತಳಿಗಳ ಉತ್ಪನ್ನಗಳನ್ನು ಉಪಯೋಗಿಸುವ ಮನುಷ್ಯರು ಆರೋಗ್ಯವಂತರಾಗುತ್ತಾರೆ ಎಂದು ಹಿರಿಯ ಪತ್ರಕರ್ತ ಹಾಗೂ ಖ್ಯಾತ ಸಂಸ್ಕೃತ ಪಂಡಿತ ಸಿ.ಎ.ಭಾಸ್ಕರ ಭಟ್ ಹೇಳಿದರು.ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಶ್ರೀಲಕ್ಷ್ಮೀ ಗೋಮಾತಾ ಮಂದಿರ ಪಾಂಚಗವ್ಯ ಉತ್ಪನ್ನ ಕೇಂದ್ರದಿಂದ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ತಂಡದ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಿದ್ದ ಗೋದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಿನಾಟಿ ಗೋತಳಿಗಳ ಸಂಖ್ಯೆ ದಿನೇದಿನೇ ಕ್ಷೀಣಿಸುತ್ತಿದೆ. ರೈತರು ವಿದೇಶಿ ಸೀಮೆ ಹಸುಗಳು ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಈ ಹಸುಗಳು ಮನುಷ್ಯನ ದೇಹಕ್ಕೆ ಹಾನಿಕಾರಕವಾಗಿದೆ. ಈ ಹಸುವಿನ 2 ಲೀಟರ್ ಹಾಲನ್ನು ಉಪಯೋಗಿಸುವ ಬದಲು ನಾಟಿ ತಳಿ ಹಸುವಿನ 200 ಗ್ರಾಂ ಹಾಲನ್ನು ಉಪಯೋಗಿಸಿದರೆ ಪೌಷ್ಟಿಕಾಂಶ ಹೆಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ ದೇಶಿಯ ಗೋ ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.ನಾಟಿ ತಳಿ ಹಸುಗಳನ್ನು ಸಾಕಾಣಿಕೆ ಮಾಡುವ ರೈತರ ಸಂಖ್ಯೆಯೂ ಹೆಚ್ಚಾಗಬೇಕಿದೆ. ದೇಶಿ ಗೋವುಗಳನ್ನು ಸಾಕುವ ಮೂಲಕ ರೈತರು ಆರ್ಥಿಕವಾಗಿಯೂ ಸಧೃಡರಾಗಬಹುದು. ದೇಶಿ ಗೋ ಆರ್ಕವನ್ನು ಮನುಷ್ಯನ ದೇಹದ ಸಮಸ್ಯೆಗಳಿಗೆ ಒಳ್ಳೆಯ ಔಷಧವಾಗಿ ಬಳಕೆಯಾಗುತ್ತಿದೆ. ಇಂತಹ ದೇಶಿ ಹಸುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಜಿಲ್ಲಾ ಭಾರತೀಯ ಕಿಸಾನ್ ಸಂಘದ ಕಲ್ಲುದೇವನಹಳ್ಳಿ ಶಿವಣ್ಣ ಮಾತನಾಡಿ, ದೇಶಿ ಗೋಸಂರಕ್ಷಣೆ ವಿಷಯದಲ್ಲಿ ರೈತರು ಜಾಗೃತಿ ವಹಿಸಬೇಕಿದೆ. ದೇಶೀ ಗೊ ಬೆರಣಿಯಲ್ಲಿ ಅಗ್ನಿಹೋತ್ರ ಮಾಡುವುದರಿಂದ ಅನೇಕ ರೀತಿಯ ಲಾಭಗಳಿವೆ. ಮಧ್ಯ ಪ್ರದೇಶದ ಭೂಪಾಲ್ ಅನಿಲ ದುರಂತದಲ್ಲಿ ಅನೇಕರು ಇಂದಿಗೂ ಅಂಗವಿಕಲರಾಗಿದ್ದಾರೆ. ಅಲ್ಲಿಯ ಕೆಲವು ಸ್ಥಳೀಯರು ಅಗ್ನಿಹೋತ್ರ ಮಾಡಿದ ಪರಿಣಾಮವಾಗಿ ಆರೋಗ್ಯವಂತರಾದ ಉದಾಹರಣೆಗಳಿವೆ. ಹಾಗಾಗಿ ತಾತ್ಸಾರ ಮಾಡದೆ ನಾಟಿ ತಳಿ ಗೋವುಗಳನ್ನು ಹೆಚ್ಚು ಸಾಕಲು ರೈತರು ಮುಂದಾಗಬೇಕು ಎಂದರು.ಇದೇ ವೇಳೆ ಗದ್ದೇ ಭೂವನಹಳ್ಳಿ ಹರೀಶ್ ಸೇರಿದಂತೆ ಹಲವು ರೈತರಿಗೆ ಮಲೆನಾಡು ಗಿಡ್ಡ ಹಸುವನ್ನು ಉಚಿತವಾಗಿ ನೀಡಿದರು. ಜಿಲ್ಲಾ ಧರ್ಮಜಾಗರಣಾ ಸಂಚಾಲಕ ಅಮಾವಾಸ್ಯೆಗೌಡ, ತಾಲೂಕು ಗೋ ಸೇವಾ ಪ್ರಮುಖ ಶಶಿಕುಮಾರ್, ಶೇಷಾದ್ರಿ, ದಿಲೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು