ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಗಳಲ್ಲಿ ತಯಾರಿಸುವ ವಸ್ತುಗಳ ಮಾದರಿಗಳಿಂದ ಮಕ್ಕಳ ಜ್ಞಾನವು ವೃದ್ಧಿಸುತ್ತದೆ ಎಂದು ಪ್ರಾಚಾರ್ಯ ಬಾಬು ಪಾಲಬಾಂವಿ ಹೇಳಿದರು.ರಬಕವಿಯ ಎಕ್ಸಪರ್ಟ್ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕ ಯುಗವು ಹೊಸ ಹೊಸ ತಂತ್ರಜ್ಞಾನದಿಂದ ಕೂಡಿದೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಹಾಗು ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಅನಿವಾರ್ಯವಾಗಿದೆ. ಇಂತಹ ಚಿತ್ರಣಗಳ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ತಿಳಿಹೇಳಲು ಸಾಧ್ಯ. ಇಂದು ಒಟ್ಟು ೩೫೦ಕ್ಕೂ ಹೆಚ್ಚು ಮಕ್ಕಳು ವಿವಿಧ ರೀತಿಯ ವಿಷಯಗಳನ್ನೊಳಗೊಂಡ ವಸ್ತು ಪ್ರದರ್ಶನ ಮಾಡಿದ್ದಾರೆ. ಈ ರೀತಿಯ ಪ್ರದರ್ಶನಗಳಿಂದ ವಿನೂತನ ಆಲೋಚನೆಗಳು ದೊರಕುವವು. ಸೃಜನಶೀಲತೆಯೊಂದಿಗೆ ಮಕ್ಕಳ ಬುದ್ಧಿ ಮಟ್ಟವೂ ಬೆಳೆಯುತ್ತದೆ ಎಂದರು. ಈ ಸಂದರ್ಭದಲ್ಲಿ ಮಕ್ಕಳು ತಾವು ಮಾಡಿಕೊಂಡು ಬಂದಂತಹ ವಿವಿಧ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು ಮತ್ತು ಅವುಗಳ ಬಗ್ಗೆ ನೀಡುತ್ತಿದ್ದ ವಿವರಣೆ ಗಮನ ಸೆಳೆಯಿತು. ಪಾಲಕರು ಮಕ್ಕಳ ಮಾತುಗಾರಿಕೆಯನ್ನು ಕಂಡು ಬೆರಗಾದರು. ಇಲ್ಲಿ ಒಟ್ಟು ೩೫೦ ವಿದ್ಯಾರ್ಥಿಗಳು ತಮ್ಮ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು.
ಕಾರ್ಯದರ್ಶಿ ಶಿವು ಗಿರಿಸಾಗರ, ಮುಖ್ಯ ಗುರುಗಳಾದ ಮೊಹಮ್ಮದರಫೀಕ್ ನದಾಫ್, ಮುಖ್ಯ ಅತಿಥಿಗಳಾದ ಕೆಂಚಪ್ಪ ನಾಯಕ, ಬಸಯ್ಯ ವಸ್ತ್ರದ, ಪ್ರಕಾಶ ಕುಂಬಾರ ಶಿಕ್ಷಕರಾದ ಸತೀಶ ಮಗದುಮ, ಸುಭಾಸ, ಬಾಹುಬಲಿ ಪಕಾಲಿ, ಜ್ಯೋತಿ ಶಿಂಧೆ, ಶೃತಿ ಖವಾಸಿ ಸೇರಿದಂತೆ ಅನೇಕರು ಇದ್ದರು.