ಬಹುತೇಕ ಅಪರಾಧಿಗಳು ನಶೆಯ ದಾಸರಾಗುತ್ತಿದ್ದಾರೆ. ಡ್ರಗ್ಸ್, ಗಾಂಜಾದಂತಹ ದುರಭ್ಯಾಸಕ್ಕೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಜಾಗೃತಿಗಳು ಹೆಚ್ಚಾಗಬೇಕಿದೆ.

ಧಾರವಾಡ:

ವಿದ್ಯಾರ್ಥಿಗಳು ನಿತ್ಯ ಧ್ಯಾನ ಮಾಡುವುದರಿಂದ ಮನಸ್ಸನ್ನು ನಿಯಂತ್ರಣದಲ್ಲಿಡಲು ಸಾಧ್ಯ. ಅದರಿಂದ ಏಕಾಗ್ರತೆ ವೃದ್ಧಿಯಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ತಮ್ಮದೇ ಆದ ಗುರಿಯೊಂದಿಗೆ ಮುನ್ನಡೆಯಬೇಕೆಂದು ಡಿಸಿಪಿ ಶ್ರುತಿ ಎನ್.ಎಸ್. ಹೇಳಿದರು.

ಕೇಂದ್ರ ಸರ್ಕಾರದ ಮೈ ಭಾರತ ಕೇಂದ್ರ, ಯುವಜನ ಹಾಗೂ ಕ್ರೀಡಾ ಸಚಿವಾಲಯ, ಜನತಾ ಶಿಕ್ಷಣ ಸಮಿತಿ ಹಾಗೂ ಕುಮಾರೇಶ್ವರ ಕಲ್ಬರಲ್ ಸೊಸೈಟಿ ಜಂಟಿಯಾಗಿ ಆಯೋಜಿಸಿದ್ದ ನಶಾ ಮುಕ್ತ ಯುವ-ವಿಕಸಿತ ಭಾರತ ಉದ್ಘಾಟಿಸಿದ ಅವರು, ಬಹುತೇಕ ಅಪರಾಧಿಗಳು ನಶೆಯ ದಾಸರಾಗುತ್ತಿದ್ದಾರೆ. ಡ್ರಗ್ಸ್, ಗಾಂಜಾದಂತಹ ದುರಭ್ಯಾಸಕ್ಕೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಜಾಗೃತಿಗಳು ಹೆಚ್ಚಾಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿಪರೀತ ಮೊಬೈಲ್ ಬಳಕೆ ಮಾಡುತ್ತಿದ್ದು, ಇದ ಸಹ ಒಂದು ರೀತಿಯ ನಶೆಯಾಗಿದೆ. ಮಾದಕ ವಸ್ತುಗಳ ವ್ಯಸನದಿಂದ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದರಿಂದ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನಶೆಯಲ್ಲಿದ್ದಾಗ ಮಾನಸಿಕ ನಿಯಂತ್ರಣ ಕಳೆದುಕೊಂಡು, ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ ಯುವಕರನ್ನು ಹೊರತರಲು ಧರ್ಮಸ್ಥಳದಲ್ಲಿ ವ್ಯಸನಮುಕ್ತ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಸಂಸ್ಕೃತಿ ಚಿಂತಕ ಡಾ. ಶಶಿಧರ ನರೇಂದ್ರ ಮಾತನಾಡಿ, ಜೆಎಸ್‌ಎಸ್‌ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯಾಯ, ಸಂಗ್ರಾಮ ಸಾವಂತ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಮಲ್ಲಯ್ಯ ಕರಡಿ ವಂದಿಸಿದರು.

ನಶಾ ಮುಕ್ತ ಯುವ-ವಿಕಸಿತ ಭಾರತ ಧೈಯದ ಕುರಿತು ಜಾನಪದ ಸಂಗೀತ, ಶಾಸ್ತ್ರೀಯ, ಜಾನಪದ ನೃತ್ಯ, ನಾಟಕ, ಮೂಕಾಭಿನಯ, ಚಿತ್ರಕಲೆ, ಭಾಷಣ, ಕಿರುಚಿತ್ರ, ರಿಲ್ಸ್, ಘೋಷವಾಕ್ಯ ಬರವಣಿಗೆ ಹಾಗೂ ಕವನ ವಾಚನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಚಾಲಕ ಶಿವಾಜಿ ಕಡ್ಡೆಪ್ಪನವರ ನಿರ್ವಹಿಸಿದರು.