ಸಾರಾಂಶ
ಕನಕಗಿರಿ: ಸಾವಿತ್ರಿಬಾಯಿ ಪುಲೆ ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ೧೮ ಶಾಲೆಗಳನ್ನು ತೆರೆದು ಬಡ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿ ಸಮಾಜಕ್ಕೆ ಬೆಳಕಾದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ಹೇಳಿದರು.
ಪಟ್ಟಣದ ಬಸರಿಹಾಳ ರಸ್ತೆಯ ಶ್ರೀ ಸಾಯಿ ಫಂಕ್ಷನ್ ಹಾಲ್‌ನಲ್ಲಿ ಜಿಪಂ, ಶಿಕ್ಷಣ ಇಲಾಖೆ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ದಿನಾಚರಣೆ, ಶೈಕ್ಷಣಿಕ ಕಾರ್ಯಾಗಾರ, ೨೦೨೩ನೇ ಸಾಲಿನಲ್ಲಿ ವರ್ಗಾವಣೆಗೊಂಡ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸನ್ಮಾನ ಹಾಗೂ ಶೈಕ್ಷಣಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಅಂದು ಅಕ್ಷರ ಕಲಿಸಲು ಮುಂದಾಗಿದ್ದ ಸಾವಿತ್ರಿಬಾಯಿ ಪುಲೆಗೆ ಕಲ್ಲು, ಸಗಣಿ, ಕೊಳೆತ ಟೊಮ್ಯಾಟೊ ಎಸೆದು ಅವಮಾನಿಸಲಾಗಿತ್ತು. ಛಲ ಬಿಡದೇ ತಮ್ಮ ಕಾರ್ಯ ಮುಂದುವರೆಸಿ ತಮ್ಮದೇ ಆದ ಶಿಕ್ಷಣ ಸಂಸ್ಥೆಯೊಂದನ್ನು ತೆರೆದು ಬಡ ಮಕ್ಕಳಿಗೆ ನೀಡುವಲ್ಲಿ ಮುಂದಾದರು. ಹೀಗೆ ಶಿಕ್ಷಣವನ್ನು ಮತ್ತಷ್ಟು ಬಳಗೊಳಿಸಬೇಕೆನ್ನುವ ಇಚ್ಛೆಯಿಂದ ೧೮ ಶಾಲೆಗಳನ್ನು ಆರಂಭಿಸಿ ಶಿಕ್ಷಣ ವಂಚಿತರಿಗೆ ಅಕ್ಷರ ಕಲಿಸುವ ಕಾರ್ಯ ನಡೆಯಿತು.
ಬಾಲ್ಯವಿವಾಹ ಹಾಗೂ ಸತಿಸಹಗಮನ ಪದ್ಧತಿಯನ್ನು ಹೋಗಲಾಡಿಸಿದರು. ಇಂತಹ ಅನೇಕ ಸಾಮಾಜಿಕ ಕಾರ್ಯವನ್ನು ಮೆಚ್ಚಿ ಅಂದಿನ ಬ್ರಿಟಿಷ್ ಸರ್ಕಾರ ಪುಲೆ ಅವರಿಗೆ ಗೌರವಿಸಲ್ಪಟ್ಟಿತು ಎಂದರು.ನಂತರ ಕುಷ್ಟಗಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೀವನಸಾಬ ಬಿನ್ನಾಳ ಮಾತನಾಡಿ, ಅನ್ನಕ್ಕಿಂತ ಅಕ್ಷರವೇ ಶ್ರೇಷ್ಠ ಎನ್ನುವ ಉದ್ದೇಶ ಹೊಂದಿ ಸಮುದಾಯದಲ್ಲಿದ್ದ ಕಲಿಕೆಯಿಂದ ದೂರ ಉಳಿದಿದ್ದವರನ್ನು ಅಕ್ಷರ ಕಲಿಸಿ ಮುನ್ನೆಲೆ ತರುವ ಕೆಲಸ ಸಾವಿತ್ರಿಬಾಯಿ ಮಾಡಿದರು.
ಪ್ಲೇಗ್ ಮತ್ತು ಬರಗಾಲದ ವಿರುದ್ಧ ಹೋರಾಡಿ ಬಡವರ, ಕಾರ್ಮಿಕರ ಹಾಗೂ ಮಹಿಳೆಯರಿಗೆ ಅಕ್ಷರ ಕಲಿಸಿ ಶಿಕ್ಷಣ ಕ್ಷೇತ್ರವನ್ನು ಪರಿವರ್ತನೆದೆಡೆಗೆ ಕೊಂಡೊಯ್ದ ಕೀರ್ತಿ ಸಾವಿತ್ರಿಬಾಯಿ ಪುಲೆಗೆ ಸಲ್ಲಬೇಕೆಂದು ತಿಳಿಸಿದರು.ಇದಕ್ಕೂ ಮುನ್ನ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಶಂಶಾದಬೇಗಂ ಆಶಯ ನುಡಿಗಳನ್ನಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿಸ್ವಾಮಿ ಶೈಕ್ಷಣಿಕ ಪತ್ರಿಕೆ ಬಿಡುಗಡೆಗೊಳಿಸಿದರು. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ನೌಕರರನ್ನು ಸನ್ಮಾನಿಸಲಾಯಿತು.
ಮಕ್ಕಳಿಗೆ ಅನ್ಯಾಯ ಮಾಡಬೇಡಿ: ಈಚೆಗೆ ಕನಕಗಿರಿ ತಾಲೂಕಿನಲ್ಲಿ ನಡೆದ ಜನ ಸಂಪರ್ಕ ಸಭೆಗಳಲ್ಲಿ ಶಿಕ್ಷಕರದ್ದೇ ಹೆಚ್ಚಾಗಿ ದೂರು ಬಂದಿವೆ. ಶಿಕ್ಷಕರು ಸರಿಯಾಗಿ ಶಾಲೆಗೆ ಬಾರದೇ ಗೈರಾಗುವುದು, ಮಕ್ಕಳಿಗೆ ಮೊಟ್ಟೆ ವಿತರಿಸದಿರುವುದು ಸೇರಿದಂತೆ ನಾನಾ ಸಮಸ್ಯೆಗಳ ವಿರುದ್ಧ ದೂರು ಬಂದಿವೆ. ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು.
ಶಾಲೆಗೆ ಗೈರಾಗಿ ಮಕ್ಕಳಿಗೆ ಅನ್ಯಾಯ ಮಾಡಬೇಡಿ. ಪ್ರಾಮಾಣಿಕವಾಗಿ ಕೆಲಸ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಬಿಇಒ ವೆಂಕಟೇಶ ತಮ್ಮ ಉದ್ಘಾಟನಾ ನುಡಿಗಳಲ್ಲಿ ಶಿಕ್ಷಕರಿಗೆ ಸೂಚಿಸಿದರು.
ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸುರೇಶಗೌಡ, ಪಿಐ ಜಗದೀಶ ಕೆ.ಜಿ., ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಡಿ.ಜಿ. ಸಂಗಮ್ಮನವರ್, ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲಕುಮಾರ, ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಮಾರೆಪ್ಪ ಎನ್., ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಸತೀಶಕುಮಾರ ಜರ‍್ಹಾಳ, ಶಿಕ್ಷಣಾಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಜಗದೀಶ ಹಾದಿಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಶಿರಿಗೇರಿ, ಕೋಶಾಧ್ಯಕ್ಷ ಉಮೇಶ ಲಮಾಣಿ, ನಿರ್ದೇಶಕ ತಿಪ್ಪೇಶ ಇದ್ದರು.