ಕಾರ್ಕಳ: ಸುಮಾರು 140 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾಸಕ ವಿ. ಸುನೀಲ್ ಕುಮಾರ್ ಅವರ ಕನಸಿನ ಹಾಗೂ ಮಹತ್ವಾಕಾಂಕ್ಷೆಯ ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ಕಳೆದ 15 ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ, ಯೋಜನಾ ಪ್ರದೇಶದಲ್ಲಿ ವಾಸವಾಗಿರುವ ನಿರ್ವಹಣಾ ಸಿಬ್ಬಂದಿ ಹಾಗೂ ಅವರ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ವಿದ್ಯುತ್ ಸಮಸ್ಯೆ ಪರಿಹರಿಸುವಲ್ಲಿ ಸಂಬಂಧಪಟ್ಟವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.ಕಾರ್ಕಳ ತಾಲೂಕಿನ ಒಂಬತ್ತು ಗ್ರಾಮಗಳಲ್ಲಿನ ಬೇಸಿಗೆಯ ಕುಡಿಯುವ ನೀರು ಹಾಗೂ ಕೃಷಿ ನೀರಿನ ಕೊರತೆ ನೀಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಪಶ್ಚಿಮಕ್ಕೆ ಹರಿಯುವ ಎಣ್ಣೆಹೊಳೆಯ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕೃಷಿಭೂಮಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶ. ಅಜೆಕಾರು, ಹಿರ್ಗಾನ, ಹೆರ್ಮುಂಡೆ ಸೇರಿದಂತೆ ವಿವಿಧ ಗ್ರಾಮಗಳ ಕೃಷಿಕರಿಗೆ ಯೋಜನೆಯಿಂದ ಅನುಕೂಲವಾಗುತ್ತಿದೆ.

2022ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆ ಉದ್ಘಾಟಿಸಿದ್ದರು. ಜಾಕ್‌ವೆಲ್‌ನಲ್ಲಿರುವ ಪಂಪ್‌ಸೆಟ್‌ಗಳು ಸೇರಿದಂತೆ ವಿವಿಧ ಉಪಕರಣಗಳ ನಿರ್ವಹಣೆಗಾಗಿ ಸಿಬ್ಬಂದಿ ಕುಟುಂಬ ಸಮೇತ ಯೋಜನಾ ಪ್ರದೇಶದಲ್ಲೇ ವಾಸವಾಗಿದ್ದಾರೆ. ಆದರೆ ಕಳೆದ 15 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಬೆಳಕು, ಕುಡಿಯುವ ನೀರು ಸೇರಿದಂತೆ ದಿನನಿತ್ಯದ ಮೂಲಭೂತ ಸೌಲಭ್ಯಗಳಿಗೂ ತೊಂದರೆ ಎದುರಾಗಿದೆ.ಯೋಜನೆಗೆ ಸಂಬಂಧಿಸಿದ ವಿದ್ಯುತ್ ಬಿಲ್ ಬಾಕಿಯೇ ಸಂಪರ್ಕ ಕಡಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ₹2 ಕೋಟಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿದಿತ್ತು. ಇದೀಗ ಸರ್ಕಾರ ಬಾಕಿ ಮೊತ್ತವನ್ನು ಕಂತುಗಳ ಮೂಲಕ ಪಾವತಿಸುತ್ತಿದೆ ಎನ್ನಲಾಗಿದ್ದರೂ, ವಿದ್ಯುತ್ ಸಂಪರ್ಕ ಇನ್ನೂ ಪುನಃಸ್ಥಾಪನೆಯಾಗಿಲ್ಲ.ವಿದ್ಯುತ್ ಸಮಸ್ಯೆ ಕುರಿತು ಸೈಟ್ ಇನ್‌ಚಾರ್ಜ್‌ ಅವರನ್ನು ಸಂಪರ್ಕಿಸಿದಾಗ, ಸೂಕ್ತ ಉತ್ತರ ದೊರಕಲಿಲ್ಲ.

ಕೋಟ್ಯಂತರ ರೂಪಾಯಿ ವೆಚ್ಚದ ಮಹತ್ವದ ಯೋಜನೆಯ ನಿರ್ವಹಣೆಯ ಜವಾಬ್ದಾರಿ ಹೊಂದಿರುವವರಿಂದ ಇಂತಹ ಪ್ರತಿಕ್ರಿಯೆ ಬಂದಿರುವುದು ಸಿಬ್ಬಂದಿ ಹಾಗೂ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಸ್ತುತ ಯೋಜನೆಯನ್ನು ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿದೆ. 2027ರ ಡಿಸೆಂಬರ್ ಅಂತ್ಯದ ವೇಳೆಗೆ ಯೋಜನೆಯನ್ನು ಸರ್ಕಾರದ ವಾರಾಹಿ ಯೋಜನೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.


ಖಾಸಗಿ ಕಂಪನಿಯು ಸೈಟ್ ಇನ್‌ಚಾರ್ಜ್ ಈ ಕೆಲಸ ಮಾಡಿಸಿಕೊಳ್ಳಬೇಕು, ಯಾವುದೆ ಸಂಬಂಧವಿಲ್ಲ , ಬಾಕಿ‌ ಉಳಿದಿರುವ ಹಣವನ್ನು ಸರ್ಕಾರವೇ ಕಟ್ಟಲಿದೆ. -ಪ್ರೀತಂ ವಾರಾಹಿ ಮುಖ್ಯ ಇಂಜಿನಿಯರ್