ಎನ್ನೆಸ್ಸೆಸ್‌ ಶಿಬಿರಗಳು ವೈಚಾರಿಕ ಪ್ರಜ್ಞೆ ಬೆಳೆಸುವಲ್ಲಿ ಸಹಕಾರಿ

| Published : May 23 2024, 01:07 AM IST

ಎನ್ನೆಸ್ಸೆಸ್‌ ಶಿಬಿರಗಳು ವೈಚಾರಿಕ ಪ್ರಜ್ಞೆ ಬೆಳೆಸುವಲ್ಲಿ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಎನ್.ಎಸ್.ಎಸ್. ಶಿಬಿರಗಳು ಗ್ರಾಮೀಣ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳಸುವಲ್ಲಿ ಸಹಕಾರಿಯಾಗಿವೆ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಎಚ್. ಶಿವಾನಂದ ಹೇಳಿದರು.

ಹಿರೇಕೆರೂರು: ಎನ್.ಎಸ್.ಎಸ್. ಶಿಬಿರಗಳು ಗ್ರಾಮೀಣ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳಸುವಲ್ಲಿ ಸಹಕಾರಿಯಾಗಿವೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಎಚ್. ಶಿವಾನಂದ ಹೇಳಿದರು.

ತಾಲೂಕಿನ ಯತ್ತಿನಹಳ್ಳಿ ಎಂ.ಕೆ. ಗ್ರಾಮದಲ್ಲಿ ಮಂಗಳವಾರ ಸಂಜೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಂಪತ್ತು ವಿದ್ಯಾರ್ಥಿಗಳು ಮತ್ತು ಯುವಕರು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಇದು ಮಹಾತ್ಮ ಗಾಂಧೀಜಿ ಅವರ ಜನ್ಮ ಶತಮಾನೋತ್ಸವ ವರ್ಷ ಅಂದರೆ ೨೪-೦೯-೧೯೬೯ರಂದು ಅನುಷ್ಠಾನಗೊಂಡಿತು. ಗಾಂಧೀಜಿ ಆಶಯಂತೆ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಮಾಜದ ಸೇವಾ ಕಾರ್ಯಗಳಲ್ಲಿ ತೊಡಗುವಂತೆ, ವಿದ್ಯಾರ್ಥಿಗಳು ಸಮಾಜಮುಖಿ ನಾಗರಿಕನಾಗಿ ರೂಪಿಸುವಲ್ಲಿ ಎನ್.ಎಸ್.ಎಸ್. ಪಾತ್ರ ಬಹುದೊಡ್ಡದು. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ಉತ್ತಮ ನಾಯಕತ್ವ, ವೃತ್ತಿಗೌರವ, ಸಹಬಾಳ್ವೆ, ಭಾವೈಕ್ಯತೆ ಹಾಗೂ ಸಮಾಜದ ಜವಾಬ್ದಾರಿ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಶಿವಮೂರ್ತೆಪ್ಪ ಬಣಕಾರ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಅಸಮಾನತೆ ಭ್ರಷ್ಟಾಚಾರ ಹೋಗಲಾಡಿಸುವ ಜತೆಗೆ ಉತ್ತಮ ಪರಿಸರ, ಅದರ ಅರಿವು, ದೇಶಪ್ರೇಮದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಿದರೆ ರಾಷ್ಟ್ರ ಸುಧಾರಣೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಆರೋಗ್ಯಪೂರ್ಣವಾದ ರಾಷ್ಟ್ರ ನಿರ್ಮಾಣ ಮಾಡಲು ಇಂತಹ ಶಿಬಿರಗಳಿಂದ ಸಾಧ್ಯವಾಗುತ್ತದೆ ಎಂದರು.

ಶಿಬಿರಾಧ್ಯಾಕ್ಷ ಹಾಗೂ ಪ್ರಾಚಾರ್ಯ ಡಾ. ಎಸ್.ಪಿ. ಗೌಡರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮದ ಮುಖಂಡರಾದ ದಯಾನಂದ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಡಾ. ಕಾಂತೇಶರೆಡ್ಡಿ ಗೋಡಿಹಾಳ್, ಶ್ರೀನಿವಾಸ ನಲವಾಗಿಲು, ಎಂ.ಬಿ. ಬದನಿಕಾಯಿ, ಜಯಕುಮಾರ, ಬಸವರಾಜ ಮಾಗಳದ, ನವೀನ್, ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಹರೀಶ ಡಿ., ಪ್ರೊ. ಗೀತಾ ಎಂ. ಮತ್ತಿತರರು ಉಪಸ್ಥಿತರಿದ್ದರು.