ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಎನ್ನೆಸ್ಸೆಸ್ ನಮ್ಮಲ್ಲಿ ನಿಸ್ವಾರ್ಥತೆ, ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ ಎಂದು ಇಲ್ಲಿನ ಪಿಇ ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.ಗುರುವಾರ ಇಲ್ಲಿನ ಭಂಡಾರಿ ಮತ್ತು ರಾಠಿ ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ಅಶ್ರಯದಲ್ಲಿ ತಾಲೂಕಿನ ಹಾನಾಪುರ ಗ್ರಾಮದಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ವ್ಯಕ್ತಿತ್ವವನ್ನು ಬೆಳೆಸುವ ಪ್ರಧಾನ ವೇದಿಕೆ ಎನ್ನೆಸ್ಸೆಸ್. ನಮ್ಮ ಬದುಕಿಗೆ ಭದ್ರವಾದ ಬುನಾದಿ ಹಾಕಿಕೊಡುತ್ತದೆ. ಏಳು ದಿನಗಳ ಈ ವಾರ್ಷಿಕ ವಿಶೇಷ ಶಿಬಿರದಲ್ಲಿ ತಾವೆಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮಾಜದ ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗಿದೆ. ಈ ವಾರ್ಷಿಕ ವಿಶೇಷ ಶಿಬಿರದಲ್ಲಿ ಗ್ರಾಮದ ನೈರ್ಮಲ್ಯ, ಸ್ವಚ್ಛತೆ ಮತ್ತು ಊರಿನ ಪ್ರಮುಖ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಮತ್ತು ಸುಮಾರು 30 ಜನ ಶಿಬಿರಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದೀರಿ. ನಿಮ್ಮ ಈ ಎಲ್ಲ ಶ್ರಮ ಈ ಶಿಬಿರದಲ್ಲಿ ಸಾರ್ಥಕವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಪ್ರವೃತ್ತಿಯನ್ನು ತಾವು ತಮ್ಮ ಜೀವನದಲ್ಲಿ ಮುಂದೆಯೂ ಪಾಲಿಸಿಕೊಂಡು ಹೋದರೆ ನಿಮ್ಮ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಕಾಲೇಜು ಗ್ರಂಥಾಲಯ ವಿಭಾಗದ ಚೇರ್ಮನ್ ವಿಶ್ವನಾಥ ಅಂಗಡಿ ಮಾತನಾಡಿ, ಶಿಬಿರಾರ್ಥಿಗಳು ತಾವು ಸಲ್ಲಿಸಿದ ಸೇವಾಮನೋಭಾವನೆಯನ್ನು ಮುಂದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಪದವಿ ವಿಭಾಗದ ಸದಸ್ಯ ಸಿದ್ದರಾಮಯ್ಯ ಪುರಾಣಿಕಮಠ ಮಾತನಾಡಿದರು. ಡಾ.ಎಂ.ಎಸ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಬದುಕಿನಲ್ಲಿ ಎನ್ನೆಸ್ಸೆಸ್ ಶಿಬಿರ ಮಹತ್ವದ ಅನುಭವವನ್ನು ತಂದುಕೊಡುತ್ತದೆ. ಇಲ್ಲಿ ಕಲಿತ ಸೇವಾಮನೋಭಾವನೆ ಬದುಕಿನುದ್ದಕ್ಕೂ ಸಾರ್ಥಕ ಬದುಕಿನತ್ತ ಕೊಂಡೊಯ್ಯುತ್ತದೆ. ಶಿಬಿರಾರ್ಥಿಗಳಾದ ತಾವು ತನು ಮನವನ್ನು ಅರ್ಪಿಸಿ, ಪ್ರಾಮಾಣಿಕವಾಗಿ ಸೇವೆಯನ್ನು ಮಾಡಿದ್ದೀರಿ. ನಿಮ್ಮೆಲ್ಲರ ಈ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮಹಾವಿದ್ಯಾಲಯದ ಸರ್ವ ಪ್ರಾಧ್ಯಾಪಕರು, ಶಿಬಿರಾರ್ಥಿಗಳು ಭಾಗವಹಿಸಿದ್ದರು.