ಕಡಿಮೆ ವೆಚ್ಚದಲ್ಲಿ ಉನ್ನತ ಮಟ್ಟದ ವೃತ್ತಿಪರ ಶಿಕ್ಷಣ ಪಡೆಯಲು ಸಿಎ ಕೋರ್ಸ್ ಉತ್ತಮ ಅವಕಾಶವಾಗಿದೆ. ಕೋರ್ಸ್ ಪೂರ್ಣಗೊಳಿಸಿದ ಬಳಿಕ ಉದ್ಯೋಗ ಪಡೆಯುವುದರ ಜತೆಗೆ ಸ್ವಂತ ಕಚೇರಿ ಆರಂಭಿಸಿ ಸ್ವತಂತ್ರವಾಗಿ ವೃತ್ತಿ ನಡೆಸುವ ಅವಕಾಶವೂ ಇದೆ ಎಂದು ಐಸಿಎಐ ಬಳ್ಳಾರಿ ಶಾಖೆಯ ಅಧ್ಯಕ್ಷ ಸಿಎ ಪುರುಷೋತ್ತಮರೆಡ್ಡಿ ತಿಳಿಸಿದರು.
ಬಳ್ಳಾರಿ: ಕಡಿಮೆ ವೆಚ್ಚದಲ್ಲಿ ಉನ್ನತ ಮಟ್ಟದ ವೃತ್ತಿಪರ ಶಿಕ್ಷಣ ಪಡೆಯಲು ಸಿಎ ಕೋರ್ಸ್ ಉತ್ತಮ ಅವಕಾಶವಾಗಿದೆ. ಕೋರ್ಸ್ ಪೂರ್ಣಗೊಳಿಸಿದ ಬಳಿಕ ಉದ್ಯೋಗ ಪಡೆಯುವುದರ ಜತೆಗೆ ಸ್ವಂತ ಕಚೇರಿ ಆರಂಭಿಸಿ ಸ್ವತಂತ್ರವಾಗಿ ವೃತ್ತಿ ನಡೆಸುವ ಅವಕಾಶವೂ ಇದೆ ಎಂದು ಐಸಿಎಐ ಬಳ್ಳಾರಿ ಶಾಖೆಯ ಅಧ್ಯಕ್ಷ ಸಿಎ ಪುರುಷೋತ್ತಮರೆಡ್ಡಿ ತಿಳಿಸಿದರು.
ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ವೃತ್ತಿ ಮಾರ್ಗದರ್ಶನ ಸಮಿತಿ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ವೃತ್ತಿ ಮಾರ್ಗದರ್ಶನ ಅಭಿಯಾನದಲ್ಲಿ ಮಾತನಾಡಿದರು.2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯತ್ತ ಭಾರತ ಸಾಗುತ್ತಿದೆ. ಈ ಆರ್ಥಿಕ ಬೆಳವಣಿಗೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರ ಮಹತ್ವದ್ದಾಗಿದೆ. ದೇಶದ ಆರ್ಥಿಕ ವ್ಯವಸ್ಥೆ, ಉದ್ಯಮಗಳ ಬೆಳವಣಿಗೆ ಹಾಗೂ ಹಣಕಾಸು ನಿರ್ವಹಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಸಿಎ ವೃತ್ತಿಪರರ ಅಗತ್ಯವಿದೆ. ಹೀಗಾಗಿ, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರಲ್ಲದೆ ಸಿಎ ಕೋರ್ಸ್‌ಗೆ ವಯೋಮಿತಿ ಅಥವಾ ಮೀಸಲಾತಿ ಆಧಾರಿತ ನಿರ್ಬಂಧವಿಲ್ಲ. ವೃತ್ತಿಪರ ಅರ್ಹತೆ ಪಡೆದ ಬಳಿಕ ಜೀವನಪರ್ಯಂತ ಸ್ವತಂತ್ರವಾಗಿ ವೃತ್ತಿ ನಡೆಸುವ ಅವಕಾಶವಿದೆ. ದೇಶದ ನಿರ್ಮಾಣ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಲೆಕ್ಕಪರಿಶೋಧಕರು ಪ್ರಮುಖ ಪಾಲುದಾರರಾಗಿದ್ದಾರೆ ಎಂದು ವಿವರಿಸಿದರು.
ಐಸಿಎಐ ಬಳ್ಳಾರಿ ಶಾಖೆಯ ಉಪಾಧ್ಯಕ್ಷೆ ಸಿಎ ಸ್ವಪ್ನ ಪ್ರಿಯ ಅವರು ಮಾತನಾಡಿ, ಐಸಿಎಐನ ‘ಸಿಎಎಫ್‌ವೈ ಮತ್ತು ಸೂಪರ್ ಮೆಗಾ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ–ಸೀಸನ್ 5’ರ ಅಂಗವಾಗಿ ಆ. 21ರಂದು ಬಳ್ಳಾರಿ ನಗರದ 40ಕ್ಕೂ ಹೆಚ್ಚು ಕಾಲೇಜುಗಳು ಸೇರಿದಂತೆ ಸಿರುಗುಪ್ಪ, ಸಿಂಧನೂರು, ಹಗರಿಬೊಮ್ಮನಹಳ್ಳಿ ಹಾಗೂ ಕೊಟ್ಟೂರು ಪಟ್ಟಣಗಳ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮ ನಡೆಸಲಾಯಿತು. 60ಕ್ಕೂ ಹೆಚ್ಚು ಐಸಿಎಐ ಸದಸ್ಯರು ಭಾಗವಹಿಸಿ 6,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಎ ಕೋರ್ಸ್‌ನ ಅವಕಾಶಗಳು, ಅಧ್ಯಯನ ಕ್ರಮ, ವೃತ್ತಿ ಕ್ಷೇತ್ರ ಹಾಗೂ ಭವಿಷ್ಯದ ಅವಕಾಶಗಳ ಕುರಿತು ಮಾಹಿತಿ ನೀಡಿದ್ದಾರೆ. ಅಭಿಯಾನದ ಮುಂದುವರಿದ ಭಾಗವಾಗಿ ಆ.24ರಂದು ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿಯೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ತಿಳಿಸಿದರು.ಕಾರ್ಯಕ್ರಮದ ಸಂಯೋಜಕ ಪಿಎ ವೆಂಕಟನಾರಾಯಣ, ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ವೃತ್ತಿಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗೆ ಸೇರ್ಪಡೆಯಾಗುವಂತೆ ಪ್ರೇರೇಪಿಸುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಐಸಿಎಐ ಬಳ್ಳಾರಿ ಶಾಖೆಯ ಕಾರ್ಯದರ್ಶಿ ಸಿಎ ಶರಣ್ ಪಾಟೀಲ್, ಖಜಾಂಚಿ ಸಿಎ ವಿಶ್ವನಾಥ್ ಆಚಾರಿ, ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸಿಎ ಹನುಮಂತ ರೆಡ್ಡಿ, ಸದಸ್ಯರಾದ ಸಿಎ ವೆಂಕಟೇಶ್ ಗುಂಡ ಹಾಗೂ ಸಿಎ ಜಿತೇಂದ್ರ ಸುತಾರ್ ಸೇರಿದಂತೆ ಶಾಖೆಯ ಸದಸ್ಯರು ಭಾಗವಹಿಸಿದ್ದರು.