ಸಾರಾಂಶ
ಧಾರವಾಡ:
ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಉಲ್ಲಂಘನೆ ತಡೆಯುವುದು ಆಯೋಗದ ಮೂಲ ಉದ್ದೇಶ. ಹಾಗೆಯೇ ಮಾನವ ಹಕ್ಕುಗಳು ಉಲ್ಲಂಘನೆ ಆಗದಂತೆ ಸರ್ಕಾರದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ 2023ರಿಂದ ಈ ವರೆಗೆ ಬಾಕಿ ಇದ್ದ ಒಟ್ಟು 8000 ಪ್ರಕರಣಗಳಲ್ಲಿ 5100 ಪ್ರಕರಣ ವಿಲೇವಾರಿ ಮಾಡಲಾಗಿದೆ. ಉಳಿದವು ವಿಲೇವಾರಿ ಹಂತದಲ್ಲಿವೆ. ರಾಜ್ಯಮಟ್ಟದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಆಯೋಗವು ಹೊಸ ಯೋಜನೆ ರೂಪಿಸಿ, ಜಿಲ್ಲಾಮಟ್ಟದಲ್ಲಿ ಜನರಿಗೆ ಸೇವೆ ನೀಡುವ ಉದ್ದೇಶ ಹೊಂದಿದೆ. ಹಾಗೂ ಬಾಕಿ ಇರುವಂತಹ ಪ್ರಕರಣ ಆದಷ್ಟು ಬೇಗ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಧಾರವಾಡ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 46 ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿದ್ದು 22 ಪ್ರಕರಣಗಳ ಪರಿಹಾರ ಬಾಕಿಯಲ್ಲಿ ಇವೆ. ಇದರಲ್ಲಿ 18 ಪ್ರಕರಣ ಜಿಲ್ಲಾಮಟ್ಟದಲ್ಲಿ ಬಾಕಿ ಇವೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳ ಆಯೋಗದ ಹೆಸರು ಹೇಳಿ ಕೆಲವರು ದುರುಪಯೋಗ ಪಡೆಯುವ ಕುರಿತು ಆಯೋಗಕ್ಕೆ ದೂರುಗಳು ಬಂದಿವೆ. ಇಂತಹ ಸುಳ್ಳು ದಾಖಲೆ ಇರುವ ಸಂಸ್ಥೆ ಮತ್ತು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಗೋಡಿ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಆಯೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಬಸ್ ನಿಲ್ದಾಣ, ಜೈಲು, ಪೊಲೀಸ್ ಠಾಣೆ, ವಿದ್ಯಾರ್ಥಿ ನಿಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ. ಅಂತಹ ಸ್ಥಳಗಳಲ್ಲಿ ಅಧಿಕಾರಿಗಳು ಜಾಗೃತಿ ವಹಿಸಬೇಕು. ಹೊಸದಾಗಿ ಸರ್ಕಾರದಿಂದ ಮಂಜೂರಾಗುವ ಪದವೀಧರ ವಿದ್ಯಾರ್ಥಿನಿಯರ ವಸತಿ ನಿಲಯಗಳ ಹೊಸ ಕಟ್ಟಡಗಳಲ್ಲಿ ಕೋಣೆಗೆ ಕೂಡಿಕೊಂಡು ಶೌಚಾಲಯ ಹಾಗೂ ಪ್ರತ್ಯೇಕ ಡ್ರೆಸ್ಸಿಂಗ್ ರೂಮ್ ಮಾಡಬೇಕು. ಕಾರ್ಮಿಕರ ಮಕ್ಕಳಿಗೆ ಅಗತ್ಯವಿರುವ ಅವಶ್ಯಕತೆ ನೀಡಿ, ಮೂಲಭೂತ ಸೌಕರ್ಯ ದೊರಕುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಸ್ವರೂಪ ಟಿ.ಕೆ., ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾಂವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))