ಕನ್ನಡಪ್ರಭ ವಾರ್ತೆ ಮಡಿಕೇರಿ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ನೈಜ ಆದಿವಾಸಿಗಳು, ಕಾರ್ಮಿಕರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಬಾರದು. ಆ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ತಿಳಿಸಿದ್ದಾರೆ.

ನಗರದ ಉಪ ವಿಭಾಗಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಅಧಿನಿಯಮ-1976 ರನ್ವಯ ಉಪ ವಿಭಾಗ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಜೀತ ಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಪ್ರತಿ ತಾಲೂಕಿನಲ್ಲಿ ಕೈಗೊಂಡ ಪ್ರಗತಿ ಪರಿಶೀಲನೆ ಬಗ್ಗೆ ಚರ್ಚೆ ನಡೆಸಲಾಯಿತು.

ಕಾರ್ಮಿಕರಿಗೆ ಲಭ್ಯವಾಗುವ ಸರ್ಕಾರದ ಯೋಜನೆ ಹಾಗೂ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ನೋಡಿಕೊಳ್ಳಬೇಕು, ತಿಂಗಳಿಗೊಮ್ಮೆ ಸಂಬಂಧಿಸಿದ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನಡೆಸಿ, ಈ ಬಗ್ಗೆ ಮುಂಬರುವ ಸಭೆಯಲ್ಲಿ ವರದಿ ನೀಡಬೇಕು, ಅಧಿಕಾರಿಗಳು ವಾಸ್ತವತೆ ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.


ಜಾಗೃತಿ ಸಮಿತಿ ಸದಸ್ಯರು ಹಾಗೂ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಆದಿವಾಸಿ ಸಮುದಾಯದ ಮಂದಿ ಹೆಚ್ಚಾಗಿ ಲೈನ್‍ಮನೆಯಲ್ಲಿಯೇ ವಾಸಿಸುವಂತಹ ಪರಿಸ್ಥಿತಿ ಇದೆ ಎಂದು ಸಭೆಯ ಗಮನಕ್ಕೆ ತಂದರು.

ಕುಡಿಯುವ ನೀರಿನ ಸಮಸ್ಯೆ, ಶಿಕ್ಷಣ ಇಲ್ಲದೆ, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಾಲ್ಯ ವಿವಾಹಗಳ ಪ್ರಕರಣಗಳು ನಡೆಯುತ್ತಿದೆ. ಮರವೇರಿ ಬಿದ್ದು, ಮೂಳೆ ಮುರಿತಗೊಂಡು ಕೆಲಸವಿಲ್ಲದೆ ಮನೆಯಲ್ಲಿಯೇ ಉಳಿದುಕೊಂಡಿರುವ ಶೋಚನೀಯ ಪರಿಸ್ಥಿತಿಗಳು ಕೊಡಗಿನ ಲೈನ್‍ಮನೆಗಳಲ್ಲಿ ಇದೆ. ಅಧಿಕಾರಿಗಳು ಸ್ಥಳಕ್ಕ ಭೇಟಿ ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯರುವ ಲೈನ್‍ಮನೆಗಳಲ್ಲಿ ಎಷ್ಟು ಆದಿವಾಸಿ ಕುಟುಂಬಗಳು ಇದೆ ಎಂದು ಸರ್ವೆ ನಡೆಸಬೇಕು, ಇಂದಿಗೂ ಪ್ಲಾಸ್ಟಿಕ್ ಶೆಡ್‍ಗಳಲ್ಲಿ ವಾಸಮಾಡುತ್ತಿರುವ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಅವರಿಗೆ ಜಿಲ್ಲಾಡಳಿತದಿಂದ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ನಿರ್ವಾಣಪ್ಪ ಅವರು ಆಗ್ರಹಿಸಿದರು.

ತೋಟದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಮೂಲ ದಾಖಲಾತಿಗಳನ್ನು ಪಡೆದುಕೊಳ್ಳುವುದರಿಂದ ಎಸ್.ಐ.ಆರ್. ಸಂದರ್ಭದಲ್ಲಿ ನೈಜ ಆದಿವಾಸಿಗಳು ಮತದಾನದಿಂದ ವಂಚಿತರಾಗುವ ಸಾಧ್ಯತೆಗಳಿದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಡಿ.ಎಸ್.ನಿರ್ವಣಪ್ಪ ಸಲಹೆ ಮಾಡಿದರು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಲೈನ್‍ಮನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಖಾತೆಯ ಮೂಲಕ ವೇತನವನ್ನು ನೀಡುವ ವ್ಯವಸ್ಥೆಯಾಗಬೇಕು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಜಾಗೃತಿ ಮೂಡಿಸಬೇಕು, ಒಂದು ಸ್ಥಳದಿಂದ ಮತ್ತೊಂದು ಕಡೆಗೆ ವಲಸೆಹೋದ ಕಾರ್ಮಿಕರ ಬಗ್ಗೆ ಗಮನಹರಿಸಬೇಕು ಎಂದರು.

ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ಮಾತನಾಡಿ, ಇಲಾಖೆ ವತಿಯಿಂದ ಜಾಗೃತಿ ಕಾರ್ಯಕ್ರಮಗಳು ನಡೆದಿದ್ದು, ದೌರ್ಜನ್ಯ ಕುರಿತು ಇಲಾಖೆಗೆ ದೂರು ಬಂದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದೆಂದು ತಿಳಿಸಿದರು.

ತಹಸೀಲ್ದಾರ್‌ ಶ್ರೀಧರ, ತಾ.ಪಂ.ಇಒ ಶೇಖರ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಆರ್.ಶಿರಾಝ್ ಅಹಮ್ಮದ್, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ವೈ.ಎಂ.ಸುರೇಶ್, ಪ್ಲಾಂಟರ್ಸ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಸರಸ್ವತಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ವಿಭಾಗ ಮಟ್ಟದ ಅಧಿಕಾರಿಗಳು ಇತರರು ಇದ್ದರು.