ಆಂಬ್ಯುಲೆನ್ಸ್ ಗಳು ತುರ್ತು ಸೇವೆಗೆ ಲಭ್ಯವಿರುವಂತೆ ನಿಗಾವಹಿಸಿ: ಶಾಸಕ ಶಿವಲಿಂಗೇಗೌಡ ಸೂಚನೆ

| Published : Jul 11 2025, 11:48 PM IST

ಆಂಬ್ಯುಲೆನ್ಸ್ ಗಳು ತುರ್ತು ಸೇವೆಗೆ ಲಭ್ಯವಿರುವಂತೆ ನಿಗಾವಹಿಸಿ: ಶಾಸಕ ಶಿವಲಿಂಗೇಗೌಡ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಗೃಹಲಕ್ಷ್ಮೀ ಯೋಜನೆಯಲ್ಲಿ ಕೆಲವು ಫಲಾನುಭವಿಗಳಿಗೆ ಜಿಎಸ್‌ಟಿ ನೆಪದಲ್ಲಿ ಹಣ ಬರದಂತೆ ಮಾಡಿದ್ದಾರೆಂದು ಕೆಲವು ಮಹಿಳೆಯರು ಅರ್ಜಿ ಸಲ್ಲಿಸಿದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆದು ಕುಲಂಕುಷವಾಗಿ ಪರಿಶೀಲಿಸಿ ತಕ್ಷಣವೇ ಗೃಹಲಕ್ಷ್ಮೀ ಯೋಜನೆಯ ಹಣ ಬರುವಂತೆ ಮಾಡಿ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಕರ್ಯ ಕಲ್ಪಿಸಬೇಕಾದ ಅಗ್ಗುಂದ ಗ್ರಾಮ ಪಂಚಾಯಿತಿ ಪಿಡಿಒ ಸರ್ಕಾರದ ದಾಖಲೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ತೊಂದರೆ ನೀಡುತ್ತಿದ್ದು, ದುರ್ನಡತೆ ತೋರುತ್ತಿರುವ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಅಗ್ಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಗಿರೀಶ್ ಒತ್ತಾಯಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಪಿಡಿಒ ಮಂಜುಳಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಒಂದೆರಡು ತಿಂಗಳಿನಿಂದ ಪಿಡಿಒ ಕಚೇರಿಗೆ ಬಂದಿಲ್ಲ. ಸಾಲದೆಂಬಂತೆ ಚೆಕ್ ಬುಕ್, ಪ್ರಮುಖ ಕಡತಗಳು, ಬೀರುವಿನ ಕೀಲಿ ಹಾಗೂ ಲೇಔಟ್ ಫೈಲ್ ಕೂಡಾ ತೆಗೆದುಕೊಂಡು ಹೋಗಿ ಸುತ್ತ ಮುತ್ತಲಿನ ಗ್ರಾಮಗಳ ಕೆಲಸ, ಕಾರ್ಯಗಳನ್ನು ಸ್ಥಗಿತಗೊಳಿಸಿದ್ದಾರೆ. ಐತಿಹಾಸಿಕ ಮಾಲೇಕಲ್ ತಿರುಪತಿ ರಥೋತ್ಸವದ ವೇಳೆ ಸ್ವಚ್ಛತೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು ಕಪ್ಪು ಚುಕ್ಕೆಯಾಗಿದೆ. ಜಿಲ್ಲಾ ಪಂಚಾಯತ್ ಸಿಇಒ ಹಾಗೂ ತಾಪಂ ಇಒ ಗಮನಕ್ಕೆ ತಂದರೂ ಡೋಂಟ್ ಕೇರ್ ಎನ್ನುವ ರೀತಿ ವರ್ತಿಸುತ್ತಿದ್ದು, ಭ್ರಷ್ಟಾಚಾರ ಕೂಪದಲ್ಲಿ ಮುಳುಗಿದ್ದು ವೀಡಿಯೋ ಕೂಡಾ ವೈರಲ್ ಆಗಿದೆ. ಎಲ್ಲವನ್ನೂ ಮನಗಂಡು ಕೂಡಲೇ ನಿಯೋಜಿತ ಪಿಡಿಒಗೆ ಹೊಣೆಗಾರಿಕೆ ನೀಡುವ ಜತೆಗೆ ಕರ್ತವ್ಯ ಲೋಪ ಎಸಗಿರುವ ಪಿಡಿಒ ಮಂಜುಳಾ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯರಾದ ರೇವಣ್ಣ, ರಾಜಣ್ಣ ಹಾಗೂ ಈಶಣ್ಣ ಕೂಡಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಗೌರವ ನೀಡದ ಪಿಡಿಒ ಅಮಾನತು ಮಾಡಿ ಎಂದು ಆಗ್ರಹಿಸಿದರು.

ಎಲ್ಲವನ್ನೂ ಸಮಾಧಾನದಿಂದ ಆಲಿಸಿದ ಶಾಸಕರು ಈ ವಿಷಯ ಸಂಜೆ ಮಾತಾಡೋಣ ಎಂದು ಹೇಳಿದರು. ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಕೆರೆ ಒತ್ತುವರಿ ತೆರವು, ಮನೆ ಸೌಲಭ್ಯ ಸೇರಿ ಹಲವು ಸಮಸ್ಯೆ ಪರಿಹರಿಸುವಂತೆ ನಾಗರಿಕರು ಅಹವಾಲು ಸಲ್ಲಿಸಿದರು.

ಇತ್ತೀಚಿನ ದಿನಗಳಲ್ಲಿ ಅರಸಿಕೆರೆ ನಗರದಲ್ಲಿ ನಿವೇಶನ ಹಾಗೂ ಮನೆ ನಿರ್ಮಿಸಿಕೊಂಡವರಿಗೆ ಇ- ಖಾತೆಯ ಸಮಸ್ಯೆಯಾಗಿತ್ತು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ಇ- ಖಾತೆ ಆಂದೋಲನ ಅಡಿಯಲ್ಲಿ

ಅರಸೀಕೆರೆ ನಗರಸಭಾ ಹಾಗೂ ಕಂದಾಯ ಇಲಾಖೆಯಿಂದ ಜನಸಂಪರ್ಕ ಸಭೆಯಲ್ಲಿ ಫಲಾನುಭವಿಗಳಿಗೆ ಬಿ ಖಾತೆ ಪತ್ರಗಳನ್ನು ವಿತರಿಸಲಾಯಿತು.

ಈ ಮಧ್ಯ ಆಂಬ್ಯುಲೆನ್ಸ್ ಸಮಸ್ಯೆ ಇದ್ದು, ನಿನ್ನೆ ರೋಗಿ ಒಬ್ಬರನ್ನು ಕರೆದೊಯ್ಯದೆ ಸತಾಯಿಸಿದ ಘಟನೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಇದನ್ನು ದೂರಿನ ರೂಪದಲ್ಲಿ ಜನ ಸಂಪರ್ಕ ಸಭೆಯಲ್ಲಿ ನೀಡಿ ಚರ್ಚಿಸುವ ಸಂದರ್ಭದಲ್ಲಿ ಗೊಂದಲ ಉಂಟಾಯಿತು.

ತಕ್ಷಣ ಶಾಸಕರು ಮಾತನಾಡಿ, ಕೆಟ್ಟು ಹೋಗಿರುವ ಆಂಬ್ಯುಲೆನ್ಸ್ ಗಳನ್ನು ತಕ್ಷಣವೇ ರಿಪೇರಿ ಮಾಡಿಸಿ, ತಾಲೂಕಿನಾದ್ಯಂತ ಇರುವ ಎಲ್ಲಾ ಆಂಬ್ಯುಲೆನ್ಸ್ ಗಳು ಸಹ ತುರ್ತು ಸೇವೆಗೆ ಲಭ್ಯವಿರಬೇಕು. ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ನಿಗಾ ವಹಿಸಿ, ರೋಗಿಗಳಿಗೆ ತುರ್ತು ಸೇವೆ ಒದಗಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.

ಗ್ರಾಮೀಣ ಭಾಗದಲ್ಲಿ ಮನೆಯಿಲ್ಲದವರು ಮನೆಗಾಗಿ ಅರ್ಜಿಗಳನ್ನು ಸಲ್ಲಿಸಿದರು.

ಈ ವಿಷಯವಾಗಿ ಶಾಸಕರು ತಕ್ಷಣವೇ ಪಿಡಿಒಗಳನ್ನೂ ಕರೆದು ಅರ್ಜಿ ವಿಲೇವಾರಿ ಮಾಡಿ ಕುಲಂಕುಷವಾಗಿ ಪರಿಶೀಲಿಸಿ ನಮಗೆ ವರದಿ ಕೊಟ್ಟರೆ ಸರ್ಕಾರದಿಂದ ಮನೆ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯಲ್ಲಿ ಕೆಲವು ಫಲಾನುಭವಿಗಳಿಗೆ ಜಿಎಸ್‌ಟಿ ನೆಪದಲ್ಲಿ ಹಣ ಬರದಂತೆ ಮಾಡಿದ್ದಾರೆಂದು ಕೆಲವು ಮಹಿಳೆಯರು ಅರ್ಜಿ ಸಲ್ಲಿಸಿದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆದು ಕುಲಂಕುಷವಾಗಿ ಪರಿಶೀಲಿಸಿ ತಕ್ಷಣವೇ ಗೃಹಲಕ್ಷ್ಮೀ ಯೋಜನೆಯ ಹಣ ಬರುವಂತೆ ಮಾಡಿ ಎಂದು ತಿಳಿಸಿದರು.

ಶ್ಯಾನೆಗೆರೆ ಗ್ರಾಪಂನಲ್ಲಿ 80 ಮನೆಗಳಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ಬಂದಿರುವುದರಿಂದ ಅವುಗಳ ಬಗ್ಗೆ ಪಿಡಿಒಗಳು ಸರಿಯಾದ ಮಾಹಿತಿ ತೆಗೆದುಕೊಂಡು, ಆ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡುವಂತೆ ಪಿಡಿಒ ಗಳಿಗೆ ಸೂಚನೆ ನೀಡಿದರು.

ಅರಸೀಕೆರೆ ತಾಲೂಕಿಗೆ ಸರ್ಕಾರದಿಂದ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ 4900 ಮನೆಗಳು ಮಂಜೂರಾಗಿವೆ ಎಂದ ಅವರು, ಶಕ್ತಿ ಯೋಜನೆಯಡಿ ಮಹಿಳೆಯರು 500 ಕೋಟಿಗೂ ಹೆಚ್ಚು ಪ್ರಯಾಣಿಸಿರುವುದಕ್ಕೆ ಸಿಹಿ ಹಂಚಿ, ಅಲಂಕಾರಗೊಂಡಿದ್ದ ಸರ್ಕಾರಿ ಬಸ್ ಗೆ ಹಸಿರು ನಿಶಾನೆ ತೋರಿಸಿದರು.

ನಂತರ ರೈತ ಸಂಘದ ಸದಸ್ಯರು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಶಾಸಕರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಶಾಸಕರು ಮಾತನಾಡಿ, ಎಲ್ಲಾ ಅಧಿಕಾರಿ ವರ್ಗ ಹಾಗೂ ಪಿಡಿಒ ಗಳು ಜನಸಂಪರ್ಕ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿದ್ದು ಸ್ಥಳದಲ್ಲೇ ಅರ್ಜಿ ವಿಲೇವಾರಿ ಮಾಡಬೇಕು ಎಂದು ಹೇಳಿದರು

ತಹಸೀಲ್ದಾರ್ ಸಂತೋಷ್ ಕುಮಾರ್, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಧರ್ಮ ಶೇಖರ್, ನಗರಸಭಾ ಅಧ್ಯಕ್ಷ ಸೆಮಿವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ಮಾಜಿ ಅಧ್ಯಕ್ಷ ಗಣೇಶ್, ಕಮಲಮ್ಮ, ಮಂಜುಳಾಬಾಯಿ ಮುಂತಾದವರು ವೇದಿಕೆಯಲ್ಲಿದ್ದರು.