ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಅಳ್ನಾವರ: ಹವಾಮಾನ ಇಲಾಖೆಯ ವರದಿಯಂತೆ ಸಾಮಾನ್ಯಕ್ಕಿಂತ ಬಿಸಿಲಿನ ಪ್ರಕರತೆ ಹೆಚ್ಚಾಗಲಿದೆ ಎಂಬ ಅಂದಾಜಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ತಹಸೀಲ್ದಾರ್ ಹಾಗೂ ತಾಲೂಕಿನ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಅಧ್ಯಕ್ಷರಾದ ಬಸವರಾಜ ಬೆಣ್ಣೆಶಿರೂರ ಸೂಚಿಸಿದರು.
ತಾಲೂಕಾಡಳಿತದಿಂದ ಸೋಮವಾರ ಕುಡಿಯುವ ನೀರಿನ ಸಮಸ್ಯೆ ಕುರಿತು ಸಮಾಲೋಚಿಸಲು ಆಯೋಜಿಸಲಾದ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮಾತನಾಡಿದರು.ಸಾರ್ವಜನಿಕರಿಗೆ ಒದಗಿಸುವ ಮೂಲಭೂತ ಸೌಕರ್ಯಗಳ ಪೈಕಿ ನೀರು ಮುಖ್ಯವಾಗಿದ್ದು, ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.ಮುಂದಿನ ತಿಂಗಳು ತಾಲೂಕಿನ ಬೆಣಚಿ, ಕಡಬಗಟ್ಟಿ, ಡೋರಿ ಗ್ರಾಮಗಳಲ್ಲಿ ಗ್ರಾಮದೇವಿ ಜಾತ್ರೆಯಿದ್ದು, ಸಾಕಷ್ಟು ಸಂಖ್ಯೆಯ ಜನರು ಆಗಮಿಸುವ ನಿರೀಕ್ಷೆಯಿದೆ. ಆ ಸಮಯದಲ್ಲಿ ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ಕೈಕೊಳ್ಳಬೇಕು. ಆರೋಗ್ಯ ಸಮಸ್ಯೆಯಾಗದಂತೆ ನಿಯಮಿತವಾಗಿ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಿಸುವುದು, ಹಾನಿಗೊಳಗಾದ ಪೈಪ್‌ಗಳನ್ನು ಬದಲಾಯಿಸಿ ಅದರಲ್ಲಿ ಕೊಳಚೆ ನೀರು ಸೇರದಂತೆ ನೋಡಿಕೊಳ್ಳುವುದು ಜೊತೆಗೆ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಲು ತಿಳಿಸಿದರು.
ಗ್ರಾಮದಲ್ಲಿರುವ ನೀರು ಶುಧ್ಧಿಕರಣ ಘಟಕಗಳು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಈಗಾಗಲೆ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣವಾದ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಪ್ರಾಣಿ ಪಕ್ಷಿಗಳಿಗೆ ದಾಹ ಇಂಗಿಸಿಕೊಳ್ಳಲು ನೀರು ತುಂಬಿಸಬೇಕು ಎಂದು ಬಸವರಾಜ ಬೆಣ್ಣೆಶಿರೂರ ಹೇಳಿದರು.ಬೆನಚಿ ಗ್ರಾಮದಲ್ಲಿ ಕಂಡು ಬಂದಿರುವ ನೀರಿನ ಸಮಸ್ಯೆ ಹೋಗಲಾಡಿಸಲು ಎರಡು ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಯಂತ್ರ, ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಕೊಳ್ಳಲಾಗುವುದು ಎಂದು ತಾಪಂ ಇಒ ಪ್ರಶಾಂತ ತುರಕಾಣಿ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೆಶಕ ಡಾ. ಸುನೀಲ ಬನ್ನಿಗೋಳ, ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ನೀರಾವರಿ ಇಲಾಖೆಯ ರವೀಚಂದ್ರ ಪಾಟೀಲ, ಕೃಷಿ ಇಲಾಖೆಯ ಗುರುಪ್ರಸಾದ, ಪಿಡಿಒ ಗಳಾದ ನಾಗರಾಜ ಪುಡಕಲಕಟ್ಟಿ, ಆನಂದ ಪಾಟೀಲ, ಕಂದಾಯ ನಿರೀಕ್ಷಕ ವಶೀಮ ಜಾಗೀರದಾರ ಇದ್ದರು.